

ಲೋಕಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕಟ್ಟಿ ಜನತಾ ಪ್ಲಾಟ್ ಮನೆಗಳ ಉತಾರೆ ನೀಡಬೇಕೆಂದು ಆಗ್ರಹಿಸಿ ಪಪಂ ಕಚೇರಿ ಮುಂದೆ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪಪಂನಲ್ಲಿ ಹಲವು ತಿಂಗಳಿನಿಂದ ಮನೆಗಳ ಆಸ್ತಿ ಉತಾರೆ ನೀಡುತ್ತಿಲ್ಲ. ಇದರಿಂದ ಜನತೆಗೆ ಬ್ಯಾಂಕ್ ಸಾಲ, ಆಸ್ತಿ ಖರೀದಿ ಇನ್ನಿತರ ಕೆಲಸಕ್ಕೆ ತೊಂದರೆಯಾಗುತ್ತಿದೆ. ಸಮಸ್ಯೆ ನಿವಾರಣೆಗಾಗಿ ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಲಿಕಟ್ಟಿ ಗ್ರಾಮದ ಮುಖಂಡ ಸದಾಶಿವ ಹಗ್ಗದ ಮಾತನಾಡಿ, 40 ವರ್ಷಗಳ ಹಿಂದೆ ನಮಗೆ ಮನೆ ಮಂಜೂರಾಗಿದ್ದು, ನಾವು ವಾಸವಿರುತ್ತೇವೆ, ಮನೆ ಕರವನ್ನು ತಪ್ಪದೇ ತುಂಬುತ್ತ ಬಂದಿದ್ದೇವೆ. 20 ರಿಂದ 30 ಸಾವಿರವರೆಗೆ ತೆರಿಗೆ ಕರ ತುಂಬಿದ್ದೇವೆ. ಮಕ್ಕಳಿಗೆ ಶಿಕ್ಷಣ ಸಾಲ ಸಲುವಾಗಿ, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬ್ಯಾಂಕ್ ಸಾಲ ತೆಗೆದುಕೊಳ್ಳಲು ಮನೆಗಳ ಉತಾರೆ ಅವಶ್ಯಕವಿದ್ದು ಅಧಿಕಾರಿಗಳು ಉತಾರೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಗೋವಿಂದಪ್ಪ ಕೌಲಗಿ, ವಸಂತಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಭೀಮಪ್ಪ ಭೂಸರಡ್ಡಿ, ಸದಾಶಿವ ಮಾದರ, ಬಸಪ್ಪ ಜಾನಮಟ್ಟಿ, ಅರ್ಜುನ ತಳವಾರ, ಲಾಯಪ್ಪ ಮಾದರ, ಯಲ್ಲಪ್ಪ ಮನಗೆನಿ, ಶಿವಾನಂದ ಪೂಜಾರ, ಶ್ರೀಶೈಲಗೌಡ ಪಾಟೀಲ, ಕಲ್ಲೋಳೆಪ್ಪ ಮಾದರ, ಯಲ್ಲವ್ವ ಮಾದರ, ಬಾಲವ್ವ ಮಾದರ, ಪದ್ದವ್ವ ತೆಗ್ಗಿ, ಮಾರುತಿ ಉಪ್ಪಾರ, ಸವಿತಾ ಮಾದರ ಇತರರಿದ್ದರು.
ಜಾಲಿಕಟ್ಟಿ ಜನತಾ ಪ್ಲಾಟ್‌ನ ಸರ್ವೇ ನಂ. 125ರದ್ದು ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಈ ಸರ್ವೇ ನಂ.ನಲ್ಲಿ ಬರುವ ಮನೆಗಳ ಉತಾರೆ ನೀಡಲು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ಇದ್ದು, ಅದು ಮುಗಿದ ಬಳಿಕ ವಕೀಲರು ಮತ್ತು ಮೇಲಧಿಕಾರಿಗಳ ಜತೆಗೆ ಚರ್ಚಿಸಿ ಉತಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು.
ಜ್ಯೋತಿ ಉಪ್ಪಾರ, ಪಪಂ ಮುಖ್ಯಾಧಿಕಾರಿ, ಲೋಕಾಪುರ