ಸ್ವಚ್ಛತಾ ಫೀಡ್‌ಬ್ಯಾಕ್ ನೀಡಿ, ಮೈಸೂರು ನಗರವನ್ನು ಗೆಲ್ಲಿಸಿ

swach survekshan 1
Published on

ಸದೇಶ್ ಕಾರ್ಮಾಡ್ ಮೈಸೂರು

ದೇಶದ ಅತ್ಯುತ್ತಮ ಸ್ವಚ್ಛ ನಗರಗಳನ್ನು ಗುರುತಿಸಲು ಸ್ವಚ್ಛ ಸರ್ವೇಕ್ಷಣೆ ಪ್ರಾರಂಭಗೊಂಡಿದ್ದು, ಈ ಸರ್ವೇಕ್ಷಣೆಯಲ್ಲಿ ನಾಗರಿಕರು ಸಹ ಪಾಲ್ಗೊಂಡು ತಮ್ಮ ಅಮೂಲ್ಯವಾದ ಅಭಿಪ್ರಾಯ ದಾಖಲಿಸಬಹುದು. ನಾಗರಿಕರು ನೀಡುವ ಅಭಿಪ್ರಾಯ ನಗರದ ಸ್ವಚ್ಛತೆಯ ರ‌್ಯಾಂಕಿಂಗ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಈಗಾಗಲೇ ಸ್ವಚ್ಛ ಸರ್ವೇಕ್ಷಣೆ 2024ಕ್ಕೆ ಸಂಬಂಧಿಸಿದಂತೆ ಸಿಟಿಜನ್ ಫೀಡ್‌ಬ್ಯಾಕ್ ಪಡೆಯುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮೈಸೂರಿಗರು ಸಹ ಈ ಸರ್ವೇ ಕಾರ್ಯದಲ್ಲಿ ಭಾಗವಹಿಸಬಹುದು. ನಾಗರಿಕರು https://sbmurban.org/feedback ಗೆ ಭೇಟಿ ನೀಡಿ ತಮ್ಮ ಫೀಡ್‌ಬ್ಯಾಕ್ ಅನ್ನು ನೀಡಬಹುದು. ಕೆಲವು ವರ್ಷಗಳ ಹಿಂದೆ ನಾಗರಿಕರು ಅಭಿಪ್ರಾಯವನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ವ್ಯಕ್ತಪಡಿಸಲು ಅವಕಾಶ ಇತ್ತು. ಆದರೆ, ಇದೀಗ ಕನ್ನಡ ಭಾಷೆಯಲ್ಲೂ ಅಭಿಪ್ರಾಯ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ.

https://sbmurban.org/feedback ಸಿಟಿಜನ್ ಫೀಡ್‌ಬ್ಯಾಕ್ ಲಿಂಕ್ ಓಪನ್ ಮಾಡುತ್ತಿದ್ದಂತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಗರಿಕರು ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು. ನಂತರ ರಾಜ್ಯ, ಜಿಲ್ಲೆ, ನಗರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಾಲಂಗಳನ್ನು ಭರ್ತಿ ಮಾಡಬೇಕು. ಬಳಿಕ ಸಿಟಿಜನ್ ಫೀಡ್‌ಬ್ಯಾಕ್ ನೀಡುವವರ ಹೆಸರು, ಲಿಂಗ, ವಯಸ್ಸಿನ ಮಾಹಿತಿ ನೀಡಬೇಕು. ಆದರೆ, ಇದಕ್ಕೆ ದಾಖಲೆಗಳನ್ನು ನೀಡುವ ಅವಶ್ಯಕತೆ ಏನು ಇಲ್ಲ. ‘ನೀವು ಈ ನಗರ/ಸ್ಥಳದ ನಿವಾಸಿಯಾಗಿದ್ದೀರಾ?’ ಎಂಬ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿದರೆ ಆ ನಂತರ ಪ್ರಶ್ನೋತ್ತರ ವಿಭಾಗ ತೆರೆದುಕೊಳ್ಳುತ್ತದೆ.

ಏನೆಲ್ಲ ಪ್ರಶ್ನೆಗಳು ಇರಲಿವೆ?: ಒಟ್ಟು 10 ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರಶ್ನೆಗಳ ಕೆಳ ಭಾಗದಲ್ಲಿ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗಿದ್ದು, ನಾಗಕರು ಅವುಗಳನ್ನು ಟಿಕ್ ಮಾಡುವ ಮೂಲಕ ಉತ್ತರಿಸಬಹುದು. ನಿಮ್ಮ ಮನೆ/ಶಾಪ್‌ಗೆ ಪ್ರತಿದಿನವೂ ತ್ಯಾಜ್ಯವನ್ನು ಸಂಗ್ರಹಿಸಲು ಯಾರಾದರು ಬರುತ್ತಾರೆಯೇ?, ಕಣ್ಣಿಗೆ ಕಾಣಿಸುವ ಕಸ ಮತ್ತು ನಿಯಮಿತವಾಗಿ ಗುಡಿಸುವ ವಿಷಯದಲ್ಲಿ ನೀವು ವಾಸಿಸುತ್ತಿರುವಂತಹ ಪ್ರದೇಶದ ಸ್ವಚ್ಛತೆಯನ್ನು ನೀವು ಹೇಗೆ ರೇಟ್ ಮಾಡುತ್ತೀರಿ?, ನಿಮ್ಮ ಪ್ರದೇಶದ ಬಳಿ ತೆಗೆದು ಹಾಕದೆಯೇ ಹಾಗೆಯೇ ಉಳಿದಿರುವಂತಹ ಕಸ ಅಥವಾ ಕಸದ ರಾಶಿಗಳು ಎಷ್ಟು ಬಾರಿ ನಿಮಗೆ ಕಾಣಿಸುವುದು?, ನಿಮ್ಮ ಮನೆಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೊದಲು ಕನಿಷ್ಠ ಒಣ ಕಸ ಹಾಗೂ ಹಸಿ ಕಸವಾಗಿ ವಿಂಗಡಣೆ ಮಾಡುತ್ತದೆಯೇ?, ತ್ಯಾಜ್ಯ ಸಂಗ್ರಹಿಸುವವರು ತ್ಯಾಜ್ಯವನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ವಾಹನಕ್ಕೆ ಲೋಡ್ ಮಾಡುತ್ತಾರೆಯೇ ಅಥವಾ ಎಲ್ಲವನ್ನೂ ಒಟ್ಟಿಗೆ ಬೆರೆಸಲಾಗುತ್ತಿದೆಯೇ? ಮಾರುಕಟ್ಟೆಗಳು, ಬಜಾರ್‌ಗಳು, ಉದ್ಯಾನಗಳು ಅಥವಾ ಇತರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸ್ಥಳೀಯ ಅಧಿಕಾರಿಗಳು ಎಷ್ಟು ಪರಿಣಾಮಕಾರಿ ಎಂದು ನೀವು ಭಾವಿಸುತ್ತೀರಿ?, ನಿಮ್ಮ ನಗರದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ರೆಡ್ಯೂಸ್, ರೀಯ್ಯೂಸ್, ರಿಸೈಕಲ್ (ಆರ್‌ಆರ್‌ಆರ್) ಕೇಂದ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ? ಯುಎಲ್‌ಬಿಯಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಪರವಾನಗಿ ಪಡೆದ ನಿರ್ವಾಹಕರು ಮಾತ್ರವೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?, ನಿಮ್ಮ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ನೀವು ಎಷ್ಟರ ಮಟ್ಟಿಗೆ ತೃಪ್ತರಾಗಿದ್ದೀರಿ?, ನೀವು ಎಂದಾದರೂ ಶುಚಿತ್ವಕ್ಕೆ ಸಂಬಂಧಿಸಿದ ಸಮಸ್ಯೆಯನ್ನು (ಉದಾಹರಣೆಗೆ ಕಸ ಸುರಿಯುವುದು, ತುಂಬಿ ಹರಿಯುವ ತೊಟ್ಟಿಗಳು, ನೈರ್ಮಲ್ಯದ ಕೊರತೆ) ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿದ್ದೀರಾ ಮತ್ತು ಅದನ್ನು ಹೇಗೆ ಪರಿಹರಿಸಲಾಯಿತು ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಮೊಬೈಲ್‌ಗೆ ಬಂದಿರುವ ಓಟಿಪಿಯನ್ನು ನಮೂದಿಸಿ ಸಬ್ಮಿಟ್ ನೀಡಿದರೆ ಫೀಡ್‌ಬ್ಯಾಕ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಿಟಿಜನ್ ಫೀಡ್‌ಬ್ಯಾಕ್‌ಗೆ ಈ ಬಾರಿ ಒಟ್ಟು 500 ಅಂಕಗಳನ್ನು ನಿಗದಿ ಪಡಿಸಲಾಗಿದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆಯಿತು. ಇದೀಗ 2024ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆ ನಡೆಯುತ್ತಿದ್ದು, ನಗರ ಈ ಬಾರಿ ರಾಷ್ಟ್ರಮಟ್ಟದಲ್ಲಿ ಯಾವ ಸ್ಥಾನ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

ಸ್ವಚ್ಛ ಸರ್ವೇಕ್ಷಣೆಯ ಸಿಟಿಜನ್ ಫೀಡ್‌ಬ್ಯಾಕ್ ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ನಗರದ ಸ್ವಚ್ಛತೆಯ ಕುರಿತು ನಾಗರಿಕರು ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ನೀಡುವ ಮೂಲಕ ಸಹಕರಿಸಬೇಕು. ಸಿಟಿಜನ್ ಫೀಡ್‌ಬ್ಯಾಕ್ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಸ್ವಚ್ಛತಾ ರಾಯಭಾರಿಗಳು, ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವನ್ನು ಪಡೆಯಲಾಗುತ್ತಿದೆ.

ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net