

ಸಿದ್ದಾಪುರ: ಮಾನವನು ಜೀವನದಲ್ಲಿ ಸತ್ಯದ ನುಡಿಗಳನ್ನು ಆಡಬೇಕು. ಒಳ್ಳೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಶ್ರೀಮನ್ನೆಲೆಮಾವುಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ಶ್ರೀಮನ್ನೆಲೆಮಾವುಮಠದಲ್ಲಿ ಹೊನ್ನಾವರ ತಾಲೂಕಿನ ಸಪ್ತಗ್ರಾಮದ ಭಕ್ತರು ಸಲ್ಲಿಸಿದ ಸಂಪೂರ್ಣ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಶಿಲ್ಪಿಯು ಶಿಲೆಯಿಂದ ಮೂರ್ತಿಯನ್ನು ಕೆತ್ತನೆ ಮಾಡುವ ಸಂದರ್ಭದಲ್ಲಿ ಅನೇಕ ವಿಧಾನಗಳಿಂದ ಸಂಸ್ಕರಿಸಿ ದೇವತಾ ಮೂರ್ತಿಯನ್ನು ನಿರ್ಮಿಸಿಪ್ರತಿಷ್ಠಾಪನೆಗೊಳಿಸಲು ಸಿದ್ಧಗೊಳಿಸುವಂತೆ ನಾವು ಸಹ ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡುವುದರ ಮೂಲಕ ಅವರ ಜೀವನಕ್ಕೆ ಮಾರ್ಗದರ್ಶಕರಾಗಬೇಕು. ತನ್ಮೂಲಕ ಒಳ್ಳೆಯ ಪ್ರಜೆಗಳನ್ನು ಸಮಾಜಕ್ಕೆ ನಿಡಿದಂತಾಗುತ್ತದೆ ಎಂದರು.
ಮಕ್ಕಳಲ್ಲಿ ದೇಶ ಪ್ರೇಮವನ್ನು ಬೆಳೆಸಬೇಕು. ಮುಂದೆ ಅವರು ದೇಶಕ್ಕಾಗಿ ತಮ್ಮ ಕೊಡುಗೆಯನ್ನು ಕೊಡುವಂತಾಗಬೇಕು. ಇದು ಸಂಸ್ಕಾರಗಳಿಂದ ಮಾತ್ರ ಸಾಧ್ಯ. ಕುಲಗುರುಗಳನ್ನು ಮತ್ತು ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯಬಾರದು. ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ನಮ್ಮ ಆಚಾರ ವಿಚಾರಗಳ ಜತೆಯಲ್ಲಿ ಒಳ್ಳೆಯ ನಡತೆಯನ್ನು ರೂಢಿಸಿಕೊಂಡು ಹೋಗಬೇಕು ಎಂದು ಹೇಳಿ ಗಾಯತ್ರಿ ಮಾತೆಯ ಮಹತ್ವವನ್ನು ವಿವರಿಸಿದರು.
ಶ್ರೀ ಮಠದ ಪುರೋಹಿತರಾದ ವಿನಾಯಕ ಭಟ್ಟ ವಾಟೆಕೊಪ್ಪ ಅವರ ಮಾರ್ಗದರ್ಶನದಲ್ಲಿ ಅನೇಕ ವೈದಿಕರ ಸಹಕಾರದಲ್ಲಿ ಸಪ್ತಗ್ರಾಮದ ಭಕ್ತರಿಂದ ಗಾಯತ್ರಿ ಜಪಾನುಷ್ಠಾನ ಮತ್ತು ಮಾತೆಯರಿಂದ ಲಲಿತಾ ಸಹಸ್ರನಾಮದ ಪಾರಾಯಣ ಮತ್ತಿತರ ಕಾರ್ಯಕ್ರಮಗಳು ನಡೆಯಿತು. ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರುಗಳು, ಶಿಷ್ಯವೃಂದದವರು ಉಪಸ್ಥಿತರಿದ್ದರು.
ಎಸ್.ಎಂ. ಹೆಗಡೆ ಹಡಿನಬಾಳ ಸ್ವಾಗತಿಸಿದರು. ವಿಷ್ಣು ಜಿ. ಭಟ್ಟ ಸುವಸ್ತು ಸಮರ್ಪಿಸಿದರು. ಜಿ.ಎಸ್. ಹೆಗಡೆ ನೀರ್ಗಾನ್ ವರದಿ ವಾಚಿಸಿದರು. ಶಂಭು ಹೆಗಡೆ ಕೆರಕೋಣ ವಂದಿಸಿದರು. ವಿನಾಯಕ ಭಟ್ಟ ನೆಲೆಮಾವು ಕಾರ್ಯಕ್ರಮ ನಿರ್ವಹಿಸಿದರು.