

ಕವಲೂರು: ಸರ್ಕಾರಿ ಶಾಲೆಯಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಿಪಿಇಪಿ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗ್ರಾಮ ಪಂಚಾಯಿತ, ಕಲಿಕೆ ಟಾಟಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಮಕ್ಕಳು ನಾಡಿನ ಆಸ್ತಿ ಹಾಗೂ ಸಂಪತ್ತು. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಟ್ರಸ್ಟ್‌ನ ಸಂಚಾಲಕ ಕಲ್ಲಪ್ಪ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಂಸ್ಕಾರ ಹಾಗೂ ಶಿಕ್ಷಣದ ಮಹತ್ವದ ಅರಿವನ್ನು ಮೂಡಿಸುವ ಕೆಲಸ ಆಗಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದು ಅವರ ಪ್ರಮುಖ ಜವಾಬ್ದಾರಿ ಆಗಿದೆ ಎಂದರು.
ಮಕ್ಕಳು ವಿವಿಧ ನಾಯಕರ ಛದ್ಮವೇಷಗಳನ್ನು ಧರಿಸಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಿದರು. ಜೊತೆಗೆ ಮಕ್ಕಳ ಕುಂಭ, ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.
ಪಿಡಿಒ ಅನಿತಾ ಕಿಲ್ಲೆದ, ಸಿಆರ್‌ಪಿ ಇಬ್ರಾಹಿಂ, ಟಾಟಾ ಕಲಿಕಾ ಟ್ರಸ್ಟ್‌ನ ಸಂಚಾಲಕ ಮಂಜುನಾಥ, ಅಂಗನವಾಡಿ ಮೇಲ್ವಿಚಾರಕಿ ರೆಹಮತ ಬಿ, ಪ್ರಮುಖರಾದ ಶರಣಪ್ಪ ಯರಾಶಿ, ಸಣ್ಣ ಭರಮಪ್ಪ, ಅಶೋಕ ಕಾಳಿ, ಲಕ್ಷ್ಮಣ ಕುರುಣಿ, ಸುಂಕಪ್ಪ, ಹಳ್ಳೆಪ್ಪ, ಮಲ್ಲಿಕಾರ್ಜುನ ಗುಗ್ರಿ, ಪವಿತ್ರಾ, ಮಂಜಮ್ಮ ಇತರರಿದ್ದರು.