

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಸಿಕ್ಕರೆ ಅವರ ಭವಿಷ್ಯ ಉಜ್ವಲವಾಗಲಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಲು ಮೊದಲ ಆದ್ಯತೆ ನೀಡಬೇಕು ಎಂದು ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಸಿಕ್ಕ ಸಂಸ್ಕಾರದಂತೆಯೇ ಮಕ್ಕಳ ಭವಿಷ್ಯ ನಿರ್ಮಾಣವಾಗಲಿದೆ. ನಮಗೆಲ್ಲ ತಂದೆ-ತಾಯಿಯಿಂದ ಸಿಕ್ಕ ಸಂಸ್ಕಾರದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇವೆ. ಇಂದಿನ ಅನೇಕ ಮಕ್ಕಳಿಗೆ ಬಡತನ ಗೊತ್ತಿಲ್ಲ. ತಂದೆ-ತಾಯಿ ಮಕ್ಕಳಿಗೆ ಕಷ್ಟಪಟ್ಟು ಎಲ್ಲ ಸೌಲಭ್ಯ ಕಲ್ಪಿಸುತ್ತಿದ್ದರೂ ಮಕ್ಕಳು ವಂಚನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸ್ತ್ರ, ಪಂಚಾಂಗ ನಮ್ಮನ್ನು ದಾರಿ ತಪ್ಪಿಸುತ್ತವೆ. ಜ್ಞಾನಿಗಳು, ವಿಚಾರವಂತರಾದರೆ ಮೌಢ್ಯದಿಂದ ದೂರವಿರಲು ಸಾಧ್ಯ. ಆದರೆ ಶಿಕ್ಷಣವಂತರೇ ಮೌಢ್ಯದತ್ತ ಸಾಗಿದ್ದಾರೆ. ಹೆಚ್ಚು ವಚನ ಸಾಹಿತ್ಯ ಓದುವಂತೆ ಮಕ್ಕಳಿಗೆ ಪ್ರೇರೇಪಿಸಿದರೆ ಅವರಿಗೆ ಧೈರ್ಯ, ಜ್ಞಾನ ಸಿಗಲಿದೆ. ಇಂದಿನ ದಿನಗಳಲ್ಲಿ ನಾಡಿನ ಸ್ಥಿತಿ ಗಮನಿಸಿದರೆ ಉಪದೇಶ ಮಾಡುವವರೇ ಹೆಚ್ಚಿದ್ದು, ಉಪದೇಶಕ್ಕಂತೆ ನಡೆಯುವವರು ಕಡಿಮೆ. ಇದೇ ಕಾರಣಕ್ಕೆ ಹಗರಣಗಳು ಹೆಚ್ಚಾಗಿವೆ ಎಂದರು.
ದೊಡ್ಡವರ ಸಾಧನೆ ಕಂಡು ನಾನೇನು ಕಡಿಮೆ ಇಲ್ಲ ಎಂಬ ಜಾಗೃತಿ ಮಕ್ಕಳಲ್ಲಿ ಮೂಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅರಿತು ಮುನ್ನಡೆಯಬೇಕು ಎಂದರು.
ಕವಿ ಚಂದ್ರಶೇಖರ ತಾಳ್ಯ, ಡಾ. ಲೋಕೇಶ ಅಗಸನಕಟ್ಟೆ ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.