ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

Gurgunta temple
ಗುರುಗುಂಟಾದ ಅಯ್ಯಪ್ಪಸ್ವಾಮಿ ಹೊರಪೇಟೆ ಮಠದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಂತೆಕೆಲ್ಲೂರಿನ ಮಹಾಂತ ಶ್ರೀಗಳು ಮಾತನಾಡಿದರು. ಪ್ರಮುಖರಾದ ಕೊಟ್ರೇಶ್ ತಾತ, ಚನ್ನಯ್ಯಸ್ವಾಮಿ, ರೇವಣಸಿದ್ದಯ್ಯಸ್ವಾಮಿ, ಗೋವಿಂದನಾಯಕ, ನಂದೀಶನಾಯಕ ಇತರರಿದ್ದರು.
Published on

ಗುರುಗುಂಟಾ: ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಉನ್ನತ ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು ಹೇಳಿದರು.

ಇಲ್ಲಿನ ಕಪ್ಪರದ ಅಯ್ಯಪ್ಪಸ್ವಾಮಿ ಹೊರಪೇಟೆ ಮಠದಲ್ಲಿ ಆರನೇ ವರ್ಷದ ಬೆಳ್ಳಿ ರಥೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ತಿದ್ದಿ ಲೋಕ ಪೂಜ್ಯರಾಗಿ ಮೆರೆದು ಲಿಂಗೈಕ್ಯರಾದ ಜೀವಿತಾವಧಿಯ ಶ್ರೀಗಳ ಸೇವೆ ಮತ್ತು ಲೀಲೆ ಅಗಾಧವಾಗಿದೆ. ಜಾಗೃತ ಸ್ಥಳವಾಗಿ ಶ್ರೀಗಳ ಜಾತ್ರೆ ನಡೆಯುತ್ತಿರುವುದೇ ಸಾಕ್ಷಿಯಾಗಿದೆ.

ಅಂತಹ ಗುರುಗಳಿಗೆ ಭಕ್ತರು ಕಾಣಿಕೆ ಪ್ರತಿಯಾಗಿ ದಾನ-ಧರ್ಮ, ಸತ್ಯ, ನ್ಯಾಯ ಮತ್ತು ಶ್ರದ್ಧಾಭಕ್ತಿಯಿಂದ ಸಾಗಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡು ಜೀವನ ಪಾವನವಾಗಿಸಿಕೊಳ್ಳಬೇಕು ಎಂದ ಅವರು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಜತೆಗೆ ಕೃಷಿ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಯಾದಗಿರಿ ಜಿಲ್ಲೆ ರಾಮಗಿರಿ ಹಿರೇಮಠದ ಕೊಟ್ರೇಶ್ ತಾತ, ಹೊರಪೇಟೆ ಮಠದ ಪ್ರಮುಖ ಚನ್ನಯ್ಯಸ್ವಾಮಿ, ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ, ಲಿಂಗಸಗೂರು ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೀಶನಾಯಕ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಅಯ್ಯಪ್ಪ ತಾತ ಗದ್ದುಗೆ ಪ್ರಾಂಗಣ ಸುತ್ತ ಬೆಳ್ಳಿ ರಥೋತ್ಸವ ಜರುಗಿತು.

ಪ್ರಮುಖರಾದ ರೇವಣಸಿದ್ದಯ್ಯ ಹೊರಪೇಟೆಮಠ, ಜಂಗಮರಹಳ್ಳಿಯ ಮೌನೇಶ ತಾತ, ಅಮರೇಶ ತಾತ, ವಿಶ್ವನಾಥ ಪಟ್ಟಣಶೆಟ್ಟಿ, ರೇವಣ್ಣಯ್ಯಸ್ವಾಮಿ, ಆನಂದ ತುರ್ವಿಹಾಳ್, ಅಮರೇಶ ಗುತ್ತೇದಾರ್, ವಿಜಯಕುಮಾರ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net