

ಹೂವಿನಹಡಗಲಿ: ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪಿಂಜಾರ ಸಮುದಾಯ ಹಿಂದುಳಿದಿದ್ದು , ಒಗ್ಗಟ್ಟಾಗುವ ಮೂಲಕ ಅಭಿವೃದ್ಧಿಯಾಗಬೇಕು ಎಂದು ನದಾಫ ಪಿಂಜಾರ್ ಸಂಘದ ಅಧ್ಯಕ್ಷ ಎಚ್.ಜಲೀಲ್‌ಸಾಬ್ ಹೇಳಿದರು.
ಇಟ್ಟಿಗಿ ಗ್ರಾಮದಲ್ಲಿ ಭಾನುವಾರ ತಾಲೂಕು ನದಾಫ ಪಿಂಜಾರ ಸಂಘದಿಂದ ಆಯೋಜಿಸಿದ್ದ ತಾಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಮುದಾಯ ರಾಜಕೀಯವಾಗಿ ಅಭಿವೃದ್ಧಿ ಆಗಬೇಕಿದೆ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಯಾವುದೇ ಕ್ಷೇತ್ರದಲ್ಲಿ ಮಕ್ಕಳು ಉದ್ಯೋಗ ಪಡೆಯಲು ಗುಣಾತ್ಮಕ ಶಿಕ್ಷಣ ಪಡೆಯಬೇಕು. ವೃತ್ತಿ ಕೌಶಲ ವೃದ್ಧಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಈಗಿನಿಂದಲೇ ಅಡಿಪಾಯ ಹಾಕಬೇಕು ಎಂದರು.
ಚೌಕಿ ಮಠದ ಸದ್ಗುರು ಗಾಡಿತಾತ ಸಾನ್ನಿಧ್ಯ ವಹಿಸಿ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಸರ್ವಧರ್ಮದವರೊಂದಿಗೆ ಸೌಹಾರ್ದ ಜೀವನ ನಡೆಸಬೇಕು ಎಂದರು. ಪ್ರಮುಖರಾದ ಕುಂಚೂರ್ ಕೊಟ್ರೇಶ, ಬಳೆಗಾರ್ ಲೋಕಪ್ಪ, ಸೋಮಣ್ಣ, ವೀರಪ್ಪ, ಸೋಮನಾಥ ಇತರರಿದ್ದರು. ನದಾಫ್ ಜಾತಿಯಲ್ಲಿ ಹುಟ್ಟಿ ಮುಸ್ಲಿಂ ಎಂದು ಹೇಳಬಾರದು, ನಮಗಾಗಿಯೇ ಸರ್ಕಾರ ಪ್ರವರ್ಗ - 1 ಮೀಸಲಾತಿ ನಿಗದಿ ಮಾಡಿದೆ. ನಾವೆಲ್ಲ ಪಿಂಜಾರ ಅಥವಾ ನದಾಫ್ ಎಂದು ದಾಖಲಾತಿಗಳಲ್ಲಿ ನಮೂದು ಮಾಡುತ್ತಾ ಆರ್ಥಿಕ, ಶೈಕ್ಷಣಿಕ, ಸೌಲಭ್ಯಗಳನ್ನು ಪಡೆಯಬೇಕು. ಜಲೀಲ್ ಸಾಬ್ ನದಾಫ್ ಪಿಂಜಾರ್ ಸಂಘದ ಅಧ್ಯಕ್ಷ