

ಗೋಕರ್ಣ: ಮಕ್ಕಳಲ್ಲಿ ಶಾಲೆ ಮತ್ತು ಶಿಕ್ಷಣದ ಕುರಿತಾಗಿ ಇರುವ ವಯೋಸಹಜ ಭಯ ಅಳಿಸಿ ಹಾಕುವ ಕಾರ್ಯವನ್ನು ಶಾಲೆ ಮತ್ತು ಶಿಕ್ಷಕರು ಕೈಗೊಳ್ಳುವಂತಾಗಬೇಕು. ಇದರಿಂದ ಕಲಿಸಿದ ಶಿಕ್ಷಣ ಬಹುಕಾಲ ಮಕ್ಕಳ ಮನದಲ್ಲಿ ನೆಲೆನಿಂತು ಉತ್ತಮ ಜೀವನ ನಿರ್ವಣಕ್ಕೆ ದಾರಿಯಾಗುತ್ತದೆ ಎಂದು ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳ ಅಧ್ಯಕ್ಷ ವೇ. ರಾಜಗೋಪಾಲ ಅಡಿ ಗುರೂಜಿ ನುಡಿದರು.
ಇಲ್ಲಿನ ವರಪ್ರದಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಚಿಣ್ಣರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ನೂತನ ಶಿಕ್ಷಣ ಕ್ರಮ ಅಳವಡಿಸಿಕೊಂಡು ಮಕ್ಕಳಲ್ಲಿ ಕಲಿಯುವಿಕೆಯ ಬಗ್ಗೆ ಉತ್ಸಾಹ ಹೆಚ್ಚಿಸುವ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ಪರಿಶ್ರಮ ಶ್ಲಾಘನಾ ಯೋಗ್ಯವಾಗಿದೆ ಎಂದರು.
ಜೆಡಿಎಸ್ ಪ್ರಮುಖ ಸೂರಜ್ ನಾಯ್ಕ ಸೋನಿ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕ ಶಿಕ್ಷಣ ಒದಗಿಸಲು ಹೊಸ ಬಗೆಯ ಪ್ರಯತ್ನಕ್ಕೆ ವರಪ್ರದಾ ಸಂಸ್ಥೆ ಮುಂದಾಗಿದೆ. ಅವರ ಈ ವಿಶಿಷ್ಟ ಸಾಧನೆ ಯಶಗೊಂಡು ಸಂಸ್ಕಾರಯುತ ಮಕ್ಕಳನ್ನು ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಆರ್. ಪಂಡಿತ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಉಮಾಮಹೇಶ್ವರ ನಾಯಕ, ಎಲ್ಐಸಿ ಪ್ರತಿನಿಧಿ ತ್ರಿವಿಕ್ರಮ ಗೌಡ, ಮಹಾದೇವಿ, ಶಾರದಾ ನಾಯಕ ಇತರರಿದ್ದರು.
ವಿದ್ಯಾರ್ಥಿಗಳಾದ ಆದ್ಯಾ, ರಿತೀಕ್ಷಾ, ಫಾತಿಮಾ ಲಿಬಾ, ನಿಧಿ, ಮಾನ್ವಿತ್, ವಿಕ್ರಮ, ಅನಿಕೇತ, ಯುಗಾ ಮತ್ತು ದಿನೇಶ ಗೌಡ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಾಲಿಬಾಲ್ ರಾಷ್ಟ್ರೀಯ ಆಟಗಾರ ಗಿರೀಶ ಪಟಗಾರ ಅವರನ್ನು ಸನ್ಮಾನಿಸಲಾಯಿತು.