

ಸೋಮವಾರಪೇಟೆ: ಮಕ್ಕಳಿಗೆ ಕೇವಲ ಅಧಿಕ ಅಂಕ ಪಡೆಯುವ ಶಿಕ್ಷಣದ ಅಗತ್ಯವಿಲ್ಲ. ಅವರಿಗೆ ಜ್ಞಾನದ ಗ್ರಹಿಕೆಯ ಸಾಮರ್ಥ್ಯವನ್ನು ಪಡೆಯುವ ಶಿಕ್ಷಣದ ಅಗತ್ಯವಿದೆ ಎಂದು ವಾಗ್ಮಿ ಪ್ರೊ.ಕೃಷ್ಣೇಗೌಡ ಅಭಿಪ್ರಾಯ ಪಟ್ಟರು.
ತಾಲೂಕಿನ ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಸೀಮಿತ ಆಗಬಾರದು. ಮುಂದಿನ ಬದುಕನ್ನು ರೂಪಿಸುವಂತಹ ಶಿಕ್ಷಣವನ್ನು ಪಡೆಯಬೇಕು. ಮಕ್ಕಳು, ಶಿಕ್ಷಕರು ಹಾಗೂ ಪಾಲಕರ ನಡೆ ನುಡಿಯನ್ನು ಅನುಕರಿಸುತ್ತಾರೆ. ಈ ನಿಟ್ಟಿನಲ್ಲಿ ಹಿರಿಯರಾದ ನಾವು ಉತ್ತಮ ನಡೆ ನುಡಿ ಮಾರ್ಗದರ್ಶನವನ್ನು ನೀಡಬೇಕು ಎಂದರು.
ಈ ಸಂದರ್ಭ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಜಿ.ಮೇದಪ್ಪ, ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಗಾಯಕಿ ಪ್ರಗತಿ ಬಡಿಗೇರ್ ಮತ್ತಿತರರು ಇದ್ದರು.