

ಕಂಪಲಾಪುರ: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪಪ್ರಾಂಶುಪಾಲೆ ಡಾ.ಎಸ್.ಜಿ.ಚೈತ್ರಾ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಕಂಪಲಾಪುರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರ ಪಾತ್ರ ಕುರಿತು ಮಾತನಾಡಿದರು. ಸಮಾಜದಲ್ಲಿ ಮೊದಲು ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ದೂರಾಗಬೇಕು. ಮಹಿಳೆಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಜ್ಯೋತಿ ಬಾ ಫುಲೆ ಎಂಬ ಮಹಾನ್ ವ್ಯಕ್ತಿ ಹೆಣ್ಣು ಮಕ್ಕಳಿಗಾಗಿಯೇ ಶಾಲೆಯನ್ನೇ ತೆರೆದರು. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ರಾಜ್ಯ ವೈಜ್ಞಾನಿಕ ಪರಿಷತ್ ಕೊಡಗು ಜಿಲ್ಲಾಧ್ಯಕ್ಷೆ ವನಿತಾ ಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈಭವೀಕರಿಸಿದ ಜಾಹೀರಾತು ನೋಡಿಕೊಂಡು ಮಹಿಳೆಯರು ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಿರುವುದು ವಿಷಾದನೀಯ. ನಾಲಿಗೆ ರುಚಿಗೋಸ್ಕರ ದೇಹದ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ರಾಸಾಯನಿಕ ಪದಾರ್ಥಗಳನ್ನು ದೂರವಿಟ್ಟು ನಮ್ಮ ಸುತ್ತಲ ಪರಿಸರದಲ್ಲಿರುವ ಗಿಡಮೂಲಿಕೆಗಳನ್ನು ಸೇವಿಸಿ ಆರೋಗ್ಯವಂತರಾಗಿ ಬದುಕಬೇಕಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಾಧವರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ, ಪಿರಿಯಾಪಟ್ಟಣ ಪುರಸಭೆ ಸದಸ್ಯೆ ಮಂಜುಳಾ ರಾಜ್ ಮಾತನಾಡಿದರು.
ಬ್ಯುಟೀಷಿಯನ್, ಟೇಲರಿಂಗ್‌ನಲ್ಲಿ ತರಬೇತಿ ಪಡೆದವರಿಗೆ ಇದೇ ವೇಳೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆ ಯಲ್ಲಿ ತಾಲೂಕು ಯೋಜನಾಧಿಕಾರಿ ರವಿ, ಪತ್ರಕರ್ತ ಸದಾಶಿವ, ಮೇಲ್ವಿಚಾರಕಿ ರವಿಕಲಾ, ತಾಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿಗಳು , ಸೇವಾಪ್ರತಿನಿಧಿಗಳು , ಸದಸ್ಯರು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸಳೆಯಿತು.