

ಹುಬ್ಬಳ್ಳಿ: ನಗರದ ಉಣಕಲ್ಲ ಹಾಗೂ ಗೋಪನಕೊಪ್ಪ ಇವುಗಳು ನೃಪತುಂಗ ಬೆಟ್ಟದ ಮಗ್ಗುಲಲ್ಲಿ ಜೆ.ಕೆ. ಸ್ಕೂಲ್ ಮೂಲಕ ಸಾಗಿದರೆ ಸುಮಾರು 3ರಿಂದ 4 ಕಿ.ಮೀ. ಅಂತರದಲ್ಲಿರುವ ಎರಡು ಪ್ರಮುಖ ಊರುಗಳು.
ಈ ಎರಡು ಊರುಗಳ ಮಧ್ಯೆ ಈಗ ಅನೇಕ ಬಡಾವಣೆಗಳು ನಿರ್ಮಾಣವಾಗಿದ್ದು, ಜನಸಂಖ್ಯೆಯೂ ಬೆಳೆದಿದೆ.
ಗೋಪನಕೊಪ್ಪದಿಂದ ಉಣಕಲ್ಲ ಕಡೆಗೆ ಹೊರಟರೆ ಈ ಮಾರ್ಗದಲ್ಲಿ ಜೆ.ಕೆ. ಸ್ಕೂಲ್, ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆ, ನೃಪತುಂಗ ಬೆಟ್ಟ, ಗುಡ್ಡದ ಬಳಿಯ ವಿಶ್ವನಾಥ ದೇವಸ್ಥಾನ, ಉಣಕಲ್ಲ ಸರ್ಕಾರಿ ಪಿಯು ಕಾಲೇಜು, ಗಾನಗಂಗೆ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಶಾಲೆ ಹೀಗೆ ಅನೇಕ ಸ್ಥಳಗಳು ಇವೆ. ಈ ಎಲ್ಲ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.
ಆದರೆ, ಈ ಮಾರ್ಗದಲ್ಲಿ ನಗರ ಸಾರಿಗೆ ಬಸ್ ಸಂಚರಿಸದೇ ಇರುವುದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಓಡಾಡುತ್ತಿದ್ದ ಬಸ್ ಇತ್ತೀಚೆಗೆ ಬಂದ್ ಆಗಿದೆ ಎಂದು ಸ್ಥಳಿಯರು ಹೇಳುತ್ತಾರೆ.
ಸಾಮಾನ್ಯ ಜನರು ಈ ಮಾರ್ಗದಲ್ಲಿ ಯಾವುದೇ ಸ್ಥಳಕ್ಕೆ ಹೋಗಬೇಕಾದರೂ ಬಸ್ ಇಲ್ಲದೇ ಪರದಾಡಬೇಕಿದೆ.
ಸಿಬಿಟಿಯಿಂದ ಉಣಕಲ್ಲ ಸಾಯಿನಗರ ಕೊನೇ ಬಸ್ ನಿಲ್ದಾಣದ ವರೆಗೆ ಬಸ್ ಸೌಲಭ್ಯ ಇದೆ. ಇನ್ನೊಂದೆಡೆ ಗೋಪನಕೊಪ್ಪವರೆಗೆ ಬಸ್ ಗಳು ಸಂಚರಿಸುತ್ತವೆ. ಈ ಎರಡೂ ಸ್ಥಳಗಳ ಮಧ್ಯೆ ಅಥವಾ ಇದರಲ್ಲೇ ಕೆಲವು ಬಸ್ ಗಳನ್ನೇ ಈ ಮಾರ್ಗದ ಮೂಲಕ ಸಂಚರಿವಂತೆ ಮಾಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಸರ್ಕಾರಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಇನ್ನೂ ಅನುಕೂಲವಾಗುತ್ತದೆ. ಈ ಬಗ್ಗೆ ವಾಯವ್ಯ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಈ ಭಾಗದ ಜನರ ಕೋರಿಕೆ.