

ದೇವದುರ್ಗ: ಐದು ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆ ನೀಡುವ ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬೇಕು ಎಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಕೆ.ಇರಬಗೇರಾ ಸರ್ಕಾರಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಲಸಿಕಾ ಅಭಿಯಾನದಲ್ಲಿ ಹಲವು ಕಾರಣದಿಂದ ಲಸಿಕೆ ಹಾಕಿಸದ ಮಕ್ಕಳಿಗೆ ಲಸಿಕೆ ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಲಸಿಕೆ ಹಾಕಿಸುವುದರಿಂದ ಮಕ್ಕಳಿಗೆ ಬರಬಹುದಾದ ಬಾಲಕ್ಷಯ, ಪೋಲಿಯೋ, ಗಂಟಲಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ ಸೇರಿ ವಿವಿಧ ರೋಗಗಳಿಂದ ಮಕ್ಕಳನ್ನು ರಕ್ಷಿಸಬಹುದು. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಮಂಜುಳಾ ರೇಷ್ಮಾ ಬೇಗಂ, ಸಮುದಾಯ ಆರೋಗ್ಯ ಅಧಿಕಾರಿ ಬಂದೇನವಾಜ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಹಿರೇಮಠ, ಆರೋಗ್ಯ ನಿರೀಕ್ಷಣಾಧಿಕಾರಿ ಬಾಬುರಾವ್, ಆಶಾ ಕಾರ್ಯಕರ್ತೆ ರಂಗಮ್ಮ, ಕಲಾವತಿ ಇತರರಿದ್ದರು.