

ಗುಳೇದಗುಡ್ಡ: ಸಾರ್ವಜನಿಕ ಉದ್ದೇಶಕ್ಕಾಗಿ ಪುರಸಭೆ ಸ್ವಾಧೀನ ಪಡಿಸಿಕೊಂಡಿರುವ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಜಮೀನಿನ ಒಂದಿಷ್ಟು ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಪುರಸಭೆ ಹಾಗೂ ಸಾರ್ವಜನಿಕರು ಲಾಭ ಪಡೆಯುತ್ತಿದ್ದು, ಈ ಜಾಗವನ್ನು ವೆಂಕಟೇಶ್ವರ ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಪೂಜಾರಿಗಳು ಹಾಗೂ ಭಕ್ತರು ಸೋಮವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ವಿ.ಜಿ.ಮ್ಯಾಗಿನಹಳ್ಳಿ ಮಾತನಾಡಿ, ದೇವಸ್ಥಾನದ ಸರ್ವೇ ನಂ.176,177,179ರ ಜಮೀನು ದೇವಸ್ಥಾನಕ್ಕೆ ಸೇರಿದೆ.
ಸಾರ್ವಜನಿಕರ ಸಲುವಾಗಿ ಪುರಸಭೆ ಮುಖಾಂತರ ಹಳ್ಳ, ಹೈಸ್ಕೂಲ್, ಆಟದ ಮೈದಾನ, ಮಾರ್ಕೆಟ್, ದವಾಖಾನೆಗೆ ಒಟ್ಟು 23 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಉಳಿದ ಜಾಗವನ್ನು ಸಾರ್ವಜನಿಕರು ಹಾಗೂ ಪುರಸಭೆಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ಜಾಗವನ್ನು ಮರಳಿ ದೇವಸ್ಥಾನಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಲೆಕ್ಕ ಅಧೀಕ್ಷಕ ಇನಾಮದಾರ
ಸರ್ವೇ ನಂ.179ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಎಂದು ಜಾಗ ತೆಗೆದುಕೊಂಡು ಅಲ್ಲಿ 26 ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಿ ಪುರಸಭೆ ಬಾಡಿಗೆ ಪಡೆಯುತ್ತಿದೆ.
ಆ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು. ಠರಾವು ಮಾಡಿ ಸರ್ವೇ ನಂ.179 ರಲ್ಲಿ 14 ಪ್ಲಾಟ್ಗಳ ಮಾರಾಟ ಮಾಡಿದ್ದು, ಅಳತೆ ಮಾಡಿಸಿ ಅದರ ಹಣವನ್ನು ಈಗಿನ ಮಾಗಣಿ ಪ್ರಕಾರ ಹಣ ಸಂದಾಯ ಮಾಡಬೇಕು.
ಆಸ್ಪತ್ರೆ, ಹೈಸ್ಕೂಲ್, ಕಾಂಪೌಂಡ್ ಹೊರೆಗೆ ಇರುವ ಜಾಗವನ್ನು ದೇವಸ್ಥಾನಕ್ಕೆ ವಾಪಸ್ ಮಾಡಬೇಕು. ಸಾರ್ವಜನಿಕರು ನಮ್ಮ ಜಾಗವನ್ನು ದುರುಪಯೋಗಪಡಿಸಿಕೊಂಡಿದ್ದು, ಅವರಿಗೆ ತಾಕೀತು ಮಾಡಬೇಕು.
ಉಳಿದ ಜಾಗವನ್ನು ಬಳಸಲು ನಮಗೆ ಹಕ್ಕು ನೀಡಬೇಕು. ದೇವಸ್ಥಾನದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದಕ್ಕೂ ಮೊದಲು ವಾರ್ಡ್ ನಂ. 3ರಲ್ಲಿ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಪುರಸಭೆ ಎದುರು ಸಭೆ ಸೇರಿ ಸ್ಥಳೀಯ ಸಂಸ್ಥೆಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಶಿರಸ್ತೆದಾರ್ ಸುಭಾಷ ವಡವಡಗಿ ಮೂಲಕ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನದ ಅಶೋಕ ಪೂಜಾರ, ರವೀಂದ್ರನಾಥ ಪೂಜಾರ, ರಾಮಣ್ಣ ಚಂದರಗಿ, ಯಲ್ಲಪ್ಪ ಮಣ್ಣೂರ, ಭೀಮಪ್ಪ ರಾಘಾಪುರ, ಭೀಮಪ್ಪ ಚೂರಿ, ಸಂಗಪ್ಪ ಮಡಿವಾಳರ, ನಾಗಪ್ಪ ಮಡಿವಾಳರ, ರವಿ ಬಳಿಗೇರಿ, ಬಸಲಿಂಗಪ್ಪ ಇಂಡಿ, ರಾಘವೇಂದ್ರ ಗೋವಿನಕೊಪ್ಪ, ಈರಮ್ಮ ಗಡಾದ, ರವಿ ಬೀಳಗಿ, ಸಂತೋಷ ಭಜಂತ್ರಿ, ರಾಮು ಆಲಗುಂಡಿ, ಭರಮಪ್ಪ ಕೆರೂರ, ಭರಮಪ್ಪ ತಳವಾರ, ಮಹಾಂತೇಶ ಬಳಿಗೇರ, ಲಕ್ಷ್ಮಣ ಚಂದರಗಿ ಇದ್ದರು.