

ಭದ್ರಾವತಿ: ಎಂಪಿಎಂ ಆಕ್ರಮಿಸಿಕೊಂಡಿರುವ ದಲಿತರ ಭೂಮಿಯನ್ನು ಬಿಟ್ಟುಕೊಡುವಂತೆ ಆಗ್ರಹಿಸಿ ಮೇ 13ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ತಾಲೂಕಿನ ಡಿ.ಬಿ.ಹಳ್ಳಿ ಗ್ರಾಮ ಹಾಗೂ ಅರದೊಟ್ಟಲು ಗ್ರಾಮದ 14 ದಲಿತ ಕುಟುಂಬಗಳು ತಮಗೆ ಸೇರಿದ 8 ಎಕರೆ 20 ಗುಂಟೆ ಜಮೀನನ್ನು ಅರದೊಟ್ಟಲು ಗ್ರಾಮದ ಗ್ರಾಮಠಾಣಾಕ್ಕೆ ಬಿಟ್ಟುಕೊಟ್ಟಿದ್ದರು. ಆಗ ಸರ್ಕಾರವು 14 ಕುಟುಂಬಗಳಿಗೆ ತಲಾ 2 ಎಕರೆಯಂತೆ ಒಟ್ಟು 28 ಎಕರೆ ಭೂಮಿಯನ್ನು ಚಂದನಕೆರೆ ಗ್ರಾಮದ ಸರ್ವೇ ನಂ.12ರ ಗೋಮಾಳದಲ್ಲಿ 28 ಎಕರೆ ಭೂಮಿಯನ್ನು ಸಾಗುವಳಿ ಮಾಡಲು ಸಾಗುವಳಿ ಚೀಟಿ ನೀಡಿತ್ತು ಎಂದು ವಿವರಿಸಿದರು.
ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಚಂದನಕೆರೆ ಹಾಗೂ ಕಲ್ಲಿಹಾಳಿನ ದಲಿತರ ಜಮೀನುಗಳನ್ನು 1985-86ರಲ್ಲಿ ಎಂಪಿಎಂನವರು ದೌರ್ಜನ್ಯ ನಡೆಸಿ ಅವರಿಂದ ಕಿತ್ತುಕೊಂಡು ನೀಲಗಿರಿ ನೆಡುತೋಪು ಮಾಡಿಕೊಂಡಿದ್ದಾರೆ. ದಲಿತರು ಜಮೀನುಗಳಿಗೆ ಹೋಗದಂತೆ ಅವರನ್ನು ತಡೆ ಹಿಡಿಯಲಾಗಿದೆ. ದಲಿತರು ಆಗಿನಿಂದಲೂ ಇಲ್ಲಿಯವರೆಗೂ ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸುತ್ತಲ್ಲೇ ಬಂದಿದ್ದಾರೆ. ಆದರೂ ಅವರ ಭೂಮಿ ಕೈ ಸೇರಿಲ್ಲ ಎಂದು ದೂರಿದರು.
ಇತ್ತೀಚೆಗೆ ದಲಿತರಿಂದ ಎಂಪಿಎಂ ಕಿತ್ತುಕೊಂಡಿದ್ದ ಜಮೀನನ್ನು ಕೆಲವರು ಅಕ್ರಮವಾಗಿ ಬಗರ್ ಹುಕುಂ ಸಾಗುವಳಿ ಮಾಡಲು ಮುಂದಾಗಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಕಂದಾಯ ಸಚಿವರು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಜತೆ ಆಗಮಿಸಿ ಜಂಟಿ ಸರ್ವೇ ನಡೆಸಿ ಸರ್ಕಾರದಿಂದ ದಲಿತರಿಗೆ ಚಂದನಕೆರೆ ಗ್ರಾಮದ ಸರ್ವೇ ನಂ.12ರಲ್ಲಿ ಮಂಜೂರಾದ ಭೂಮಿಯನ್ನು ಬಿಡಿಸಿಕೊಡಬೇಕು. ಅನ್ಯಾಯವಾಗಿರುವ ದಲಿತ ಕುಟುಂಬಗಳು ಮೇ 13ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಇದುವೆರಗೂ ತಾಲೂಕು ಆಡಳಿತದ ಕ್ಯಾರೇ ಎಂದಿಲ್ಲ. ತಕ್ಷಣವೇ ಕ್ರಮಕೈಗೊಂಡು ಭೂಮಿಯನ್ನು ಬಿಡಿಸಿಕೊಡಬೇಕು ಎಂದು ತಾಲೂಕು ದಂಡಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಎಸ್.ಪುಟ್ಟರಾಜು, ಪರಮೇಶ್ ಸೋಗೂರು, ರಾಮಚಂದ್ರ, ರುದ್ರೇಶ್, ಪ್ರಭಾಕರ, ಇಮ್ರಾನ್ ಪಾಷಾ ಇತರರಿದ್ದರು.