ಅಂಜಲಿ ಪ್ರಕರಣ ಸಿಐಡಿಗೆ ಕೊಡಿ

Lad santosh New
Published on


ಹುಬ್ಬಳ್ಳಿ: ಅಂಜಲಿ ಕೊಲೆ ಪ್ರಕರಣ ತನಿಖೆ ಸಿಐಡಿಗೆ ವಹಿಸಬೇಕು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಗ್ರಹಿಸಿದರು.
ನಗರದಲ್ಲಿ ಮೃತ ಅಂಜಲಿ ಅಂಬಿಗೇರ ಅವರ ಮನೆಗೆ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಮಾಜದಲ್ಲಿ ವಿಶೇಷವಾಗಿ ಹುಬ್ಬಳ್ಳಿ -ಧಾರವಾಡದಲ್ಲಿ ಇಂತಹ ಪ್ರಕರಣಗಳು ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಪರಾಧ ಕೃತ್ಯದಲ್ಲಿ ತೊಡಗುವ ಯುವಕರ ಮನಸ್ಥಿತಿ ಎಂತಹದ್ದು ಇದೆ ಎಂದು ಅಸಮಾಧಾನ ಹೊರಹಾಕಿದರು.
ಗೃಹ ಸಚಿವರು ಸದ್ಯದಲ್ಲೇ ನಗರಕ್ಕೆ ಭೇಟಿ ನೀಡಲಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ನಿರ್ಲಕ್ಷೃ ವಹಿಸಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸುವುದು ಅವರ ಕೆಲಸ ಎಂದು ಕಿಚಾಯಿಸಿದರು.
ನಗರದಲ್ಲಿ 13 ಕೊಲೆಗಳಾಗಿವೆ ಎಂಬುದು ಅಂಕಿ-ಸಂಖ್ಯೆಗಳಿಂದ ಗೊತ್ತಾಗುತ್ತಿದೆ. ಆದರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಅಪರಾಧ ಕೃತ್ಯ ನಡೆಯುವುದು ಯಾರಿಗೂ ಗೊತ್ತಾಗಿಲ್ಲ. ಇಂತಹ ಕೃತ್ಯದಲ್ಲಿ ತೊಡಗುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಮುಂಜಾಗ್ರತ ಕ್ರಮಕೈಗೊಂಡು ಅಪರಾಧವನ್ನು ತಡೆಯಬಹುದು ಎಂದರು.
ಡ್ರಗ್ಸ್ ಮಾರಾಟವು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ನಡೆಯುತ್ತಿದೆ. ಶ್ರೀರಾಮ ಸೇನೆ ಮಹಿಳೆಯರ ಆತ್ಮ ರಕ್ಷಣೆ ಮಾಡುತ್ತಿರುವುದು ಒಳ್ಳೆಯದು. ಆದರೆ, ತ್ರಿಶೂಲ ಧೀಕ್ಷೆ ನೀಡುವ ಮತ್ತು ಕೊಡುವುದು ಪಡೆಯವವರಿಗೆ ಬಿಟ್ಟ ವಿಚಾರ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದರು.
ಅಂಜಲಿ ಕುಟುಂಬ ಬಡತನದಲ್ಲಿದೆ. ಅವರಿಗೆ ಸರ್ಕಾರವು ಪರಿಹಾರ ನೀಡುತ್ತದೆ. ಏನು ಪರಿಹಾರ ಕೊಡಲಿದೆ? ಎಂಬುದು ನಾನು ಹೇಳುವುದಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net