

ಲೋಕಾಪುರ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಗೆ ಸರಿಯಾಗಿ ಉಪಚಾರ ಮಾಡಬೇಕು. ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು. ಅನಗತ್ಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸದೆ ಹೆರಿಗೆ ಮಾಡಿಸಿಕೊಳ್ಳಬೇಕು. ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳಬೇಕೆಂದು ಸಿಬ್ಬಂದಿಗೆ ಸೂಚಿಸಿದರು.
ಇದೇ ವೇಳೆ, ಆರೋಗ್ಯ ಕೇಂದ್ರಕ್ಕೆ ವೈದ್ಯರು ಸರಿಯಾಗಿ ಬರಲ್ಲ, ರಾತ್ರಿ ಹೊತ್ತಿನಲ್ಲಿ ಸಿಬ್ಬಂದಿ ಇರುವುದರಿಂದ ಸಾರ್ವಜನಿಕರಿಗೆ ತುಂಬ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಡಿಸಿ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಪಿಎಚ್‌ಸಿಗೆ ವೈದ್ಯಾಧಿಕಾರಿ ಕೊರತೆ ನೀಗಿಸಬೇಕು. ಕೇವಲ ಒಬ್ಬ ಆಯುಷ್ಯ ವೈದ್ಯಾಧಿಕಾರಿಗಳಿಂದ ಆಸ್ಪತ್ರೆ ನಡೆಯುತ್ತಿದೆ. ಪಟ್ಟಣದಲ್ಲಿ ಜನದಟ್ಟಣೆಯಿಂದ ಅಪಘಾತಗಳು ನಡೆಯುತ್ತಿದ್ದು, ಆದ್ದರಿಂದ ಓರ್ವ ಎಂಬಿಬಿಎಸ್ ವೈದ್ಯರನ್ನು ನೇಮಿಸಬೇಕೆಂದು ಸ್ಥಳೀಯರಾದ ಪ್ರಕಾಶ ಚುಳಕಿ, ಅರುಣ ನರಗುಂದ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ತಹಸೀಲ್ದಾರ್ ಮಹಾದೇವ ಸನ್ನಮುರಿ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಡಾ. ಸುನೀಲ ಬೆನ್ನೂರ, ಡಾ. ವಿನಯ ಕುಲಕರ್ಣಿ, ಆರೋಗ್ಯ ಕೇಂದ್ರ ಸಿಬ್ಬಂದಿ ಎಂ.ಎಲ್. ಮೇಲಿನಮನಿ, ಜೆ.ಪಿ. ಜಲಗೇರಿ, ಎ.ಎಸ್. ಮುದಕವಿ ಇತರರಿದ್ದರು.