ಸುಪ್ರೀಂಕೋರ್ಟ್‌ಗೆ ಅಂಕಿ ಅಂಶಗಳ ನಿಖರ ಮಾಹಿತಿ ನೀಡಿ

3
Published on

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಅಂಕಿ ಅಂಶಗಳ ನಿಖರ ಮಾಹಿತಿ ನೀಡಿ ನೈಜ್ಯ ಸ್ಥಿತಿ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಲಹೆ ನೀಡಿದರು.


ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ನಗರದ ಇಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾವೇರಿ ನದಿ ನೀರಿನ ಚರ್ಚೆ ವಿಚಾರವಾಗಿ ಕಾವೇರಿ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.

ಸಮರ್ಥವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಬೇಕು. ಹೊಸದಿಲ್ಲಿಯಲ್ಲಿ ರಾಜ್ಯದ ಪರ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ. ಉತ್ತಮ ವಕೀಲರು ಇಲ್ಲ. ನಮ್ಮ 28 ಲೋಕಸಭಾ ಸದಸ್ಯರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಪಾರ್ಲಿಮೆಂಟಿನ ಮುಂದೆ ಅವರು ಸತ್ಯಾಗ್ರಹ ಮಾಡಬೇಕು. ಆಗ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಖಂಡಿತ ತಪ್ಪಿಸಬಹುದು ಎಂದರು.

ಇಲ್ಲವಾದರೆ ಬೆಂಗಳೂರುಗೆ ತೃಪ್ತಿಯಾಗಿ ನೀರು ಸಿಗಲ್ಲ. ನೀರನ್ನು ಮದ್ದೂರು,ಮಂಡ್ಯಕ್ಕೂ ಕೊಡೊಕೆ ಆಗಲ್ಲ. ಕನ್ನಂಬಾಡಿ ಕಟ್ಟೆ ಉಳಿಯೋದೆ ಅನುಮಾನ. ಡಿಸೆಂಬರ್‌ನಲ್ಲೇ ನೀರಿನ ಆಹಾಕಾರ ಉಂಟಾಗುತ್ತದೆ ಎಂದರು.

ಎಚ್.ಡಿ.ದೇವೇಗೌಡರು , ನಂಜೇಗೌಡರು ಹಾಗೂ ಎಚ್.ಎಂ.ಚನ್ನಬಸಪ್ಪ ಅವರು ಮಾತ್ರ ರಾಜ್ಯದ ನೀರಾವರಿ ವಿಚಾರ ಬಂದಾಗ ಕಾವೇರಿ ಕಣಿವೆಯ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ, ಇಂದು ರಾಜ್ಯ ಸರ್ಕಾರದಲ್ಲಿ ಯಾವುದೇ ಮಂತ್ರಿಗಳಿಗೆ ಈ ಬಗ್ಗೆ ಹೆಚ್ಚು ವಿಚಾರ ತಿಳಿದಿಲ್ಲದಿರುವುದು ದುರ್ದೈವದ ಸಂಗತಿ,ಎಂದು ವಿಷಾದಿಸಿದರು.

ತಮಿಳುನಾಡಿನಲ್ಲಿ ರಾಜಕೀಯವಾಗಿ ಪರಸ್ಪರ ತೀವ್ರ ವಿರೋಧವಾಗಿರುವ ಪಕ್ಷಗಳೂ ಕಾವೇರಿ ವಿಷಯದಲ್ಲಿ ಒಂದಾಗುತ್ತವೆ. ಏಕ ಕಂಠದಲ್ಲಿ ಮಾತನಾಡುತ್ತವೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿರುಗಾಮುರುಗಾ ಪರಿಸ್ಥಿತಿ ಇದೆ. ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಕಾವೇರಿ ನೀರನ್ನು ರಕ್ಷಿಸಿಕೊಳ್ಳಲು ನಮ್ಮ ಸಂಸದರು ಸೇರಿದಂತೆ ಎಲ್ಲ ಪಕ್ಷದ ರಾಜಕೀಯ ನಾಯಕರು ದೆಹಲಿ ಮಟ್ಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು.

ಕಾವೇರಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ಹೋರಾಟಕ್ಕೆ ಹೋರಾಟ ಎನ್ನುವ ಪರಿಸ್ಥಿತಿ ಬಂದಿದೆ. ಹೀಗೆ ಆದರೆ ಮುಂದಿನ ದಿನ ಕಷ್ಟ ಇದೆ. ಕನ್ನಂಬಾಡಿ ಕಟ್ಟುವುದಕ್ಕೂ ತಮಿಳುನಾಡು ವಿರೋಧಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ನದಿ ಜೋಡಣೆ ಬಗ್ಗೆ ದೊಡ್ಡ ಮಾತು ಹೇಳಿದ್ದರು. ಆದರೆ, ಎರಡು ಬಾರಿ ಆಯ್ಕೆಯಾಗಿದ್ದರೂ ನದಿ ಜೋಡಣೆ ಮಾಡಿಲ್ಲ. ಹಿಂದೆ ಇದ್ದ ರಾಜಕಾರಣಿಗಳಿಗೆ ಎಷ್ಟು ನೀರು ಬಿಡಬೇಕು ಎಂದು ಕರಗತ ಆಗಿತ್ತು. ಎಂ.ಜಿ.ರಾಮಚಂದ್ರ ಅವರು ಆಗ ಸ್ವಲ್ಪ ನೀರು ಕೊಟ್ಟರು ಸಾಕು ಎಂದಿದ್ದರು. ನಂತರ ಕರುಣಾನಿಧಿ, ಜಯಲಲಿತ ಬದ್ದ ವೈರಿಗಳಂತಿದ್ದರೂ ನೀರಿನ ವಿಚಾರದಲ್ಲಿ ರಾಜಕೀಯ ನಡೆಸಿದರು.


ತಮಿಳುನಾಡು ಹೆಚ್ಚು ನೀರು ತಗಂಡಿರೋದು ನಿಜ. ಅವರು ಕೆರೆ ಕಟ್ಟೆ ಕಟ್ಟಿಕೊಂಡು ಶೇಖರಣೆ ಮಾಡಿದ್ದಾರೆ. ನಮ್ಮಲ್ಲೂ ಅದು ಆಗಬೇಕು ಎಂದರು.
ಕಾವೇರಿ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಟಿ.ತಿಮ್ಮೇಗೌಡ ಮಾತನಾಡಿ ,ಕಾವೇರಿ ಜಲ ವಿವಾದ 150 ವರ್ಷ ಹಳೆಯದು. ನ್ಯಾಯಾಲಯದಲ್ಲಿ ಅವರ ಅಂತರ್ಜಲ ಪರಿಗಣಿಸಿಲ್ಲ. ನಮ್ಮ ಬೆಳೆ ಎಷ್ಟಿದೆ, ಅವರು ಎಷ್ಟು ಬೆಳೆ ಬೆಳೆಯುತ್ತಿದ್ದಾರೆ ಎಂಬ ಸಮರ್ಪಕ ವಾದ ಮಂಡಿಸಬೇಕು. ನಮ್ಮ ಸರಕಾರ ವಕೀಲರಿಗೆ ಸಮರ್ಪಕ ಮಾಹಿತಿ ನೀಡಿ ಸಮರ್ಥ ವಾದ ಮಂಡಿಸುವ ಹಾಗೆ ಮಾಡಬೇಕು. ಬರೀ ಹೋರಾಟದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜತೆಗೆ ರೈತರು ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು ನೀರು ಪೋಲು ಮಾಡಬಾರದು, ಅಂತರ್ಜಲ ಬಳಸಿಕೊಂಡು ಕೃಷಿ ಮಾಡಬೇಕು. ಮೇಕೆದಾಟು ಯೋಜನೆ ಕೂಡ ಕೈಗೊಳ್ಳಬೇಕು, ಎಂದು ಅಭಿಪ್ರಾಯಪಟ್ಟರು.

ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್, ಪ್ರಗತಿ ಪರ ಚಿಂತಕ ಕೆ.ಎಸ್.ಭಗವಾನ್, ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಆರ್.ಅರಸ್, ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ರೈತ ಮುಖಂಡ ಅತ್ತಹಳ್ಳಿ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net