ಬಾಲ್ಯ ವಿವಾಹದ ಬದಲು ಉತ್ತಮ ಶಿಕ್ಷಣ ಕೊಡಿಸಿ

21 HANUR 1
ಹನೂರು ತಾಲೂಕಿನ ರಾಮಾಪುರದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಎಂ.ಎನ್. ನಂದಿನಿ ಉದ್ಘಾಟಿಸಿದರು. ರವಿ, ಗುರುಪ್ರಸಾದ್, ಜಯಶೀಲಾ, ಪುಷಪಲತಾ ಇತರರು ಇದ್ದರು.
Published on

ಪಾಲಕರಿಗೆ ನ್ಯಾಯಾಧೀಶೆ ಎಂ.ಎನ್.ನಂದಿನಿ ಸಲಹೆ

ಹನೂರು: ಪಾಲಕರು ಮಕ್ಕಳ ಬಾಲ್ಯ ವಿವಾಹಕ್ಕೆ ಮುಂದಾಗದೆ ಉತ್ತಮ ಶಿಕ್ಷಣ ಕೊಡಿಸುವುದರತ್ತ ಗಮನಹರಿಸಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್. ನಂದಿನಿ ತಿಳಿಸಿದರು.

ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ, ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳಾಗುತ್ತಿದ್ದು, ಅವರ ಸ್ವಾತಂತ್ಯ್ರಕ್ಕೆ ಧಕ್ಕೆಯಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುವುದು, ಗೃಹ ಬಂಧನದಲ್ಲಿ ಇರಿಸುವುದು ದೌರ್ಜನ್ಯವೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಬೇಕು ಎಂದರು.

ಇನ್ನು ಆಹಾರದ ಪದ್ಧತಿ, ಜೀವನ ಶೈಲಿ ಹಾಗೂ ಇನ್ನಿತರ ಕೆಲವು ಕಾರಣದಿಂದ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗುತ್ತಿದ್ದಾರೆ. ಹಾಗಾಗಿ ಕೆಲ ಪಾಲಕರು ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದ್ದು, ಇದು ಹನೂರು ತಾಲೂಕಿನಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ಬಾಲ್ಯ ಕಾನೂನು ಅಪರಾಧ. ಇದರಲ್ಲಿ ಭಾಗಿಯಾದವರು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಬಾಲ್ಯ ವಿವಾಹದಿಂದ ಹಿಂದೆ ಸರಿಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರತ್ತ ಗಮನಹರಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರು ಮಾತನಾಡಿ, ದೇಶ ಸ್ವಾತಂತ್ಯರ‌್ಯೃ ಪಡೆದು 78 ವರ್ಷ ಕಳೆದಿದ್ದು, ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಸಂತಸದ ವಿಷಯ. ಆದರೆ ಮಹಿಳೆಯರು, ಮಕ್ಕಳು, ದಲಿತ ಹಾಗೂ ದುರ್ಬಲ ವರ್ಗದ ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಇದರಿಂದ ಸಮಾಜದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ದೌರ್ಜನ್ಯವನ್ನು ತಡೆಗಟ್ಟುವ ಕೆಲಸ ಆಗಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ರವಿ, ಸಿಡಿಪಿಒ ಜಯಶೀಲಾ, ಮೇಲ್ವಿಚಾರಕಿ ಶಿವಲೀಲಾ, ತಾಪಂ ಸಹಾಯಕ ನಿರ್ದೇಶಕಿ ರಾಧಾ, ಆರ್‌ಐ ಶಿವಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ವಕೀಲರಾದ ನಂದಕುಮಾರ್, ರೋಹಿತ್, ವೈದ್ಯ ಡಾ. ಮನು, ಪಿಡಿಒ ಪುಷ್ಪಲತಾ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net