ಹೊಲಿಗೆ ಯಂತ್ರದ ಬದಲು ಬ್ಯೂಟಿಪಾರ್ಲರ್ ಕಿಟ್ ನೀಡಿ

RITESHKUMAR
Published on

ಕಾರವಾರ: ಹೊಲಿಗೆ ಯಂತ್ರದ ಬದಲು ಮೊಬೈಲ್, ಕಂಪ್ಯೂಟರ್ ರಿಪೇರಿ ಕಿಟ್, ಬ್ಯೂಟಿಪಾರ್ಲರ್ ಕಿಟ್ ಮುಂತಾದವನ್ನು ಕೈಗಾರಿಕೆ ಇಲಾಖೆಯಿಂದ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಅವರು ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗ ಕಾಲ ಬದಲಾಗಿದೆ. ಬಟ್ಟೆ ಹೊಲಿಯುವರು ಕಡಿಮೆ ಆಗಿದ್ದಾರೆ. ಇದರಿಂದ ಹೊಸ ಜಾಯಮಾನಕ್ಕೆ ಸಂಬಂಧಿಸಿದ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಿ ಎಂದರು. ಸರ್ಕಾರ ನೀಡಿರುವ ಅನುದಾನವನ್ನು ಅವಶ್ಯಕತೆ ಇರುವ ಕಡೆ ಮತ್ತು ಉಪಯೋಗವಾಗುವ ರೀತಿಯಲ್ಲಿ ಖರ್ಚು ಮಾಡಿ ಎಂದು ಸೂಚಿಸಿದರು.

ಶಾಲೆಗಳಲ್ಲಿ ಶೇ. 100 ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಶಾಲೆಗಳಿಗೆ ಡೆಸ್ಕ್ ಮತ್ತು ಬೆಂಚ್ ಪೂರೈಕೆ ಮಾಡಬೇಕು. ಈಗಾಗಲೇ ಪಠ್ಯ, ಪುಸ್ತಕ, ಸಮವಸ ಪೂರೈಕೆಯಾಗಿದ್ದು, ಊಟ, ಹಾಲು, ಮೊಟ್ಟೆಯನ್ನು ಸರಿಯಾದ ಸಮಯಕ್ಕೆ ನೀಡಲು ಕ್ರಮ ವಹಿಸಬೇಕು ಎಂದರು.

ಜಿಪಂ ಕ್ರಿಯಾ ಯೋಜನೆಯ ಮಾಹಿತಿಯನ್ನು ಪತ್ರಿಕೆ, ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ತಿಳಿಸಲು ಸೂಚಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net