

ಮೈಸೂರು: ಪರಂಪರಾಗತವಾಗಿ ಮೀನು ಹಿಡಿಯುವುದನ್ನೇ ಕುಲಕಸುಬನ್ನಾಗಿ ಮಾಡಿಕೊಂಡಿರುವ ಸಮುದಾಯಕ್ಕೆ ಮೀನು ಹಿಡಿಯಲು ಶೇ.90ರಷ್ಟು ಮೀಸಲಾತಿ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮೀನುಗಾರರ ಘಟಕದ ಅಧ್ಯಕ್ಷ ಮಂಜುನಾಥ ಸುಣಗಾರ್ ಸರ್ಕಾರವನ್ನು ಆಗ್ರಹಿಸಿದರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮೀನುಗಾರರ ಸಮಾವೇಶ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಮೀನು ಮಾರಾಟ ಮಾಡಲು ಹಾಗೂ ಕೆರೆಗಳನ್ನು ಗುತ್ತಿಗೆಗೆ ಮಾಡಿಕೊಳ್ಳಲು ಮೀನುಗಾರರ ಸಮುದಾಯಕ್ಕೆ ಶೇ.90ರಷ್ಟು ಮೀಸಲಾತಿ ನೀಡಿದ್ದರು. ಆದರೆ ಅದನ್ನು ರದ್ದು ಮಾಡಿ, ಈಗ ಬೇರೆ ಸಮುದಾಯಗಳಿಗೂ ಮೀನುಗಾರಿಕೆಗೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ನಮ್ಮ ಸಮುದಾಯಕ್ಕೆ ಅವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಈ ಹಿಂದಿನಂತೆ ಕುಲಕಸುಬುಗಾರರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಮೀನುಗಾರಿಕೆ ಮಾಡುವ ಮಹಿಳೆಯರಿಗೆ ಪ್ರಸ್ತುತ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬ್ಯಾಂಕುಗಳು ಸಾಲ ನೀಡುತ್ತವೆ. ವಿದ್ಯಾನಿಧಿ ಯೋಜನೆಯಡಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ನಮ್ಮ ಸಮುದಾಯದಲ್ಲಿ ಇರುವ ವಿದ್ಯಾವಂತರು ತಿಳಿಸಿ ಹೇಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ಬಜೆಟ್‌ನಲ್ಲಿ ಮೀನುಗಾರರಿಗೆ 10 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ಇದು ಕಡಿಮೆ ಪ್ರಮಾಣವಾಗಿದೆ. ಆದ್ದರಿಂದ ಪ್ರತಿ ತಾಲೂಕಿನಿಂದಲೂ ಮನೆ ಇಲ್ಲದವರ ಪಟ್ಟಿಯನ್ನು ತಯಾರಿಸಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ನೂತನ ಅಧ್ಯಕ್ಷರಾಗಿ ರಾಮನಹಳ್ಳಿ ಸಿದ್ದಯ್ಯ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್, ಪ್ರೊ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಸದಸ್ಯರಾದ ಅರುಣ್‌ಕುಮಾರ್, ಶ್ರೀನಿವಾಸ ನಾಯಕ, ಮುಖಂಡರಾದ ಭಾಸ್ಕರ್, ಉಮಾಶಂಕರ್, ಜವರೇಗೌಡ, ನಾಗರಾಜ್, ರಮೇಶ್, ಗುರುಸ್ವಾಮಿ, ಕಾಟೂರು ದೇವರಾಜು, ದ್ಯಾವಪ್ಪನಾಯಕ, ಶಿವಪ್ರಸಾದ್, ಹುಣಸೂರು ಅಣ್ಣಯ್ಯ ನಾಯಕ, ಅಯ್ಯಮ್ಮ, ಯೋಗೇಶ್ ಇತರರು ಇದ್ದರು.