

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆದಿನಾರಾಯಣ ಹೊಸಹಳ್ಳಿಯ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪನೆಗೆ ರಿಯಾಯಿತಿ ದರದಲ್ಲಿ 50 ಎಕರೆ ಭೂಮಿ ಕೊಡಬೇಕು(Give 50 acres to Mega Jewelery Park) ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ(TA Sharavana) ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ(MB Patil) ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಜನ ಚಿನ್ನ-ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವಲಯದಿಂದ ವರ್ಷಕ್ಕೆ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂದಾಯವಾಗುತ್ತಿದೆ. ಆದರೆ ಇದುವರೆಗೂ ಜ್ಯೂವೆಲರಿ ಪಾರ್ಕ್ ಸ್ಥಾಪಿಸದೆ ಇರುವುದರಿಂದ ಹಿನ್ನಡೆಯಾಗಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪಿಸಿದರೆ ಅದಕ್ಕೆ 495 ಕೋಟಿ ರೂ. ಹೂಡಿಕೆ ಆಗಲಿದ್ದು, 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಆದ್ದರಿಂದ ಎರಡು ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿ ಘೊಷಣೆ ಆಗಿರುವ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಹೇಳಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು, ಜ್ಯೂವೆಲರಿ ಪಾರ್ಕ್ ಸ್ಥಾಪನೆ ಯೋಜನೆಯ ಅನುಷ್ಠಾನ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.