

ಇಂಡಿ: ಶಾಂತೇಶ್ವರ ದೇವಸ್ಥಾನದ ಲೆಕ್ಕಪತ್ರದಲ್ಲಿ ವ್ಯತ್ಯಾಸವಾಗಿದ್ದರೆ ಖಂಡಿತವಾಗಿಯೂ ನೀವು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸರ್ಕಾರ ಹಾಗೂ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ಪಟ್ಟಣದ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟ ಸ್ಥಳದಲ್ಲಿ ಮಂಗಳವಾರ ಅವರು ಮಾತನಾಡಿದರು.
ಕಮಿಟಿಯವರು ಹಾಗೂ ಊರಿನ ಸಾರ್ವಜನಿಕರೆಲ್ಲರೂ ಕೂಡಿಕೊಂಡು ಸಮಸ್ಯೆ ಬಗೆಹರಿಸಬಹುದು. ಹೋರಾಟ ಶಾಂತಿಯುತವಾಗಿ ಅಂತ್ಯ ಕಾಣಬೇಕು. ಬರಲಿರುವ ದಿನಗಳಲ್ಲಿ ನಡೆಯುವ ಶಾಂತೇಶ್ವರ ಜಾತ್ರೆಯನ್ನು ಊರ ಜನರೆಲ್ಲರೂ ಕೂಡಿಕೊಂಡು ವಿಜೃಂಭಣೆಯಿಂದ ನಡೆಸಿಕೊಂಡು ಬರಬೇಕು. ನಮಗೆ 30 ದಿನ ಕಾಲಾವಕಾಶ ನೀಡಬೇಕು, ಅಷ್ಟರಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಯುತ ಹೋರಾಟಕ್ಕೆ ಕರ್ನಾಟಕ ಸರ್ಕಾರದ ಪ್ರತಿನಿಧಿಯಾದ ನಾನು ಸ್ವಂದಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಂದಾಯ ಎಸಿ ಅಬೀದ್ ಗದ್ಯಾಳ ಮಾತನಾಡಿ, ತಾವು ನೀಡಿದ ಮನವಿಯನ್ನು ಈಗಾಗಲೇ ಜಿಲ್ಲಾಧಿಕಾರಿಗೆ ಕಳುಹಿಸಿದ್ದೇನೆ. ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ನೋಂದಣಿ ಅಧಿಕಾರಿ ಭಾಗ್ಯಶ್ರೀ ಕುಂಬಾರ ಮಾತನಾಡಿ, ಟ್ರಸ್ಟ್ ಕಮಿಟಿಯ ಪೂರ್ವಾಪರ ದಾಖಲೆಗಳ ಮಾಹಿತಿಯನ್ನು ಕಲೆಹಾಕಲು ನಮಗೆ ಸಮಯ ಅವಕಾಶ ಕೊಡಿ ಖಂಡಿತವಾಗಿ ಮಾಹಿತಿ ನೀಡುತ್ತೇವೆ ಎಂದರು.
ಹೋರಾಟ ಸಮಿತಿಯ ಸದಸ್ಯರಾದ ಶಂಕರಗೌಡ ಪಾಟೀಲ, ಮಲ್ಲಪ್ಪ ಹದಗಲ್ಲ, ಭೀಮನಗೌಡ ಪಾಟೀಲ, ಸಾತಪ್ಪ ತೆನ್ನಿಹಳ್ಳಿ, ಸಿದ್ದಣ್ಣ ತಾಂಬೆ, ಶಾಂತುಗೌಡ ಬಿರಾದಾರ, ರವಿಗೌಡ ಪಾಟೀಲ, ನೀಲಕಂಠಗೌಡ ಪಾಟೀಲ, ರಾಜುಗೌಡ ಪಾಟೀಲ, ಅನೀಲ ಜಂಪಾ, ಸತೀಶ ಕುಂಬಾರ, ರಾಜು ಪತಂಗೆ, ರಾಜು ಕುಲಕರ್ಣಿ, ಚನ್ನು ಬೋಡಿ, ಪಾಪು ಕಿತ್ತಲಿ ಅವರು ಕಮಿಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಶಾಸಕರಿಗೆ ಮನವಿ ಸಲ್ಲಿಸಿದರು.