ನರೇಗಾ ಕಾರ್ಮಿಕರಿಗೆ 100 ದಿನ ಕೆಲಸ ನೀಡಿ

ಸಿರಿಗೇರಿ ಗ್ರಾಪಂಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರನ್ನು ಪಿಎಸ್‌ಐ ಸದ್ದಾಂ ಹುಸೇನ್ ಮನವೊಲಿಸಿದರು. ಪಿಡಿಒ ಯು.ರಾಮಪ್ಪ, ಮೇಟಿಗಳು ಹಾಗೂ ಕೂಲಿಕಾರ್ಮಿಕರಿದ್ದರು.
ಸಿರಿಗೇರಿ ಗ್ರಾಪಂಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರನ್ನು ಪಿಎಸ್‌ಐ ಸದ್ದಾಂ ಹುಸೇನ್ ಮನವೊಲಿಸಿದರು. ಪಿಡಿಒ ಯು.ರಾಮಪ್ಪ, ಮೇಟಿಗಳು ಹಾಗೂ ಕೂಲಿಕಾರ್ಮಿಕರಿದ್ದರು.
Published on

ಸಿರಿಗೇರಿ: ನರೇಗಾ ಕೆಲಸದ ಸ್ಥಳದಲ್ಲಿ ಮೂಲಕ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಕೂಲಿಕಾರ್ಮಿಕರು ಹಾಗೂ ಮೇಟಿಗಳು ಧಿಡೀರ್‌ನೆ ಇಲ್ಲಿನ ಗಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮೇಟಿ ಹಳ್ಳಿಮರದ ಹನುಮಂತ ಮಾತನಾಡಿ, ಗ್ರಾಮದಲ್ಲಿ ಒಟ್ಟು 4300 ನರೇಗಾ ಕೂಲಿ ಕಾರ್ಮಿಕರಿದ್ದಾರೆ. ಕೇವಲ 1500 ಎನ್‌ಎಂಆರ್ ಹಾಕಿಕೊಡಲಾಗುತ್ತಿದೆ. 82 ಮೇಟಿಗಳಲ್ಲಿ ಕೇವಲ 20 ಜನಕ್ಕೆ ಮಾತ್ರ ತರಬೇತಿ ನೀಡಲಾಗಿದೆ. ಕೆಲಸದ ಸ್ಥಳ ಬಿಟ್ಟು ಬೇರೆ ಕಡೆ ಕೆಲಸ ಮಾಡಿಸಲಾಗುತ್ತಿದೆ. ಈ ವರೆಗೆ ಒಂದು ಜಾಬ್ ಕಾರ್ಡ್‌ಗೆ 100 ದಿನಗಳ ಕೆಲಸ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸದ ಸ್ಥಳದಲ್ಲಿ ಶ್ಯಾಮಿಯಾನ, ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ ಕಿಟ್, ಕೂಸಿನ ಮನೆ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕು. ಫಾರ್ಮ್-6 ನೀಡಿ 15 ದಿನದೊಳಗೆ ಕೆಲಸ ನೀಡಬೇಕು. ಮೇಟಿಗಳಿಗೆ 5 ವರ್ಷದಿಂದ ವೇತನ ನೀಡಿಲ್ಲ. ಪ್ರತಿ ವರ್ಷ ಇದೇ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ವೃದ್ಧರಿಗೆ, ಅಂಗವಿಕಲರಿಗೆ ಪೂರ್ಣ ಕೆಲಸ ಮಾಡಲು ಹೇಳಲಾಗುತ್ತಿದೆ. ಪ್ರತಿ ಹಂತದಲ್ಲೂ ಅಧಿಕಾರಿಗಳಿಂದ ದೌರ್ಜನ್ಯ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಯು.ರಾಮಪ್ಪ, ಕೂಲಿಕಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನಕಾರರು ಸ್ಥಳದಿಂದ ಕದಲದೇ ಸಮಸ್ಯೆ ಕೇಳಲು ಜಿಪಂ ಸಿಇಒ, ಇಒ, ಸಹಾಯಕ ನಿರ್ದೇಶಕರು ಬರಬೇಕು ಎಂದು ಪಟ್ಟು ಹಿಡಿದು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪಿಎಸ್‌ಐ ಸದ್ದಾಂ ಹುಸೇನ್ ಅವರು ಪ್ರತಿಭಾಟನಾಕಾರನ್ನು ಸಮಾಧಾನಪಡಿಸಿದರು.

ಪ್ರಮುಖರಾದ ಮಹಾಂಕಾಳಮ್ಮ, ದ್ಯಾವಮ್ಮ, ಲಕ್ಷ್ಮೀ, ಈರಮ್ಮ, ನಾಗಮ್ಮ, ಶಶಿಕಲಾ, ಹಳ್ಳಿ ಮರದ ನಾಗರಾಜ, ಪಂಪಾಪತಿ, ಶಿವಾಜಿರಾವ್, ಚಾನಾಳ್ ಆಯ್ಯಪ್ಪ, ಪರಶುರಾಮ, ಜ್ಞಾನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net