ಪಾಠದ ಜತೆಗೆ ಕ್ರೀಡೆಯೂ ಅವಶ್ಯ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Gitanjali Sports Festival Mandya
Published on

ಮಂಡ್ಯ: ವಿದ್ಯಾರ್ಥಿಗಳಿಗೆ ಪಾಠದ ಜತೆ ಕ್ರೀಡಾ ಚಟುವಟಿಕೆಯೂ ಅತ್ಯಾವಶ್ಯಕ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್, ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಗೀತಾಂಜಲಿ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಬೇಕು. ಚಿನ್ನದಂತ ಸಮಯದಲ್ಲಿ ಯಾವ ಜೀವನ ರೂಪಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿದು ಎತ್ತರಕ್ಕೆ ಗುರಿ ಕಾಣಬೇಕು. ಅಂತಹ ಸಮಯವನ್ನು ವಿದ್ಯಾರ್ಥಿ ಜೀವನದಲ್ಲಿ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ರೀಡೆಗಳು ಮನುಷ್ಯನ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ. ಇಂದಿನ ಹಣ ದುಬ್ಬರದಲ್ಲೂ ಎಸ್.ಬಿ.ಎಜುಕೇಷನ್ ಶಿಕ್ಷಣ ಸಂಸ್ಥೆಗಳು ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣವನ್ನು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.

ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕ್ರೀಡೆ ಎನ್ನುವುದು ಎಲ್ಲರ ಮನೋಲ್ಲಾಸಕ್ಕೆ ಕಾರಣವಾಗುತ್ತದೆ. ಓದಿನಷ್ಟೇ ವಿದ್ಯಾರ್ಥಿಗಳಿಗೆ ಕ್ರೀಡೆ ಮುಖ್ಯವಾಗಿದೆ. ಇಡೀ ಪ್ರಪಂಚದಲ್ಲಿ ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹವಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸಿನಿಮಾ ತಾರೆಯರು, ವಿಜ್ಞಾನಿಗಳಿಗೂ ಹೆಚ್ಚಾಗಿ ಜನಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಿರಂತರ ಅಭ್ಯಾಸದಿಂದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಮೊದಲಿಗರಾಗಬಹುದು. ಒಲಂಪಿಕ್ಸ್ ಕ್ರೀಡೆಗಳನ್ನು ಆಡಿ ಭಾರತಕ್ಕೆ ಹೆಸರು ತರುವ ರೀತಿ ಬೆಳೆಯಬೇಕು ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷರೂ ಆದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ್, ಟ್ರಸ್ಟ್ ಉಪಾಧ್ಯಕ್ಷೆ ಡಾ.ಹೇಮಾ ಶಿವಲಿಂಗಯ್ಯ, ಗೀತಾಂಜಲಿ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಸರೋಜಾ, ಮುಖ್ಯಶಿಕ್ಷಕ ವಿ.ಡಿ.ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net