ಹೆಣ್ಣುಮಕ್ಕಳು ಚೆನ್ನಾಗಿ ಓದಿ ಉನ್ನತ ಹುದ್ದೆ ಅಲಂಕರಿಸಿ

3-kollegalphoto-1
ಕೊಳ್ಳೇಗಾಲದ ನ್ಯಾಷನಲ್ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಕೊಳ್ಳೇಗಾಲ ತಾಲೂಕು ಮುಸ್ಲಿಂ ಸಮುದಾಯದ ವತಿಯಿಂದ ಆಯೋಜಿಸಿದ್ದ 76ನೇ ಸಂವಿಧಾನ ಜನಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಚಿಂತನ್ , ಎ.ಜೆ.ಖಾನ್, ಅಬ್ದುಲ್ ತವಾಬ್, ಮಹದೇವ್ ಕುಮಾರ್ ಇತರರಿದ್ದರು.
Published on

ಕೊಳ್ಳೇಗಾಲ: ಮುಸ್ಲಿಂ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಉನ್ನತ ಹುದ್ದೆ ಅಲಂಕರಿಸಿ ಪಾಲಕರಿಗೆ, ಸಮುದಾಯಕ್ಕೆ ಕೀರ್ತಿ ತರುವಂತಹ ಕೆಲಸ ಮಾಡಬೇಕು ಎಂದು ಮೈಸೂರು ಉರಿಲಿಂಗಿಪೆದ್ದಿ ಶಾಖಾ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ನ್ಯಾಷನಲ್ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಕೊಳ್ಳೇಗಾಲ ತಾಲೂಕು ಮುಸ್ಲಿಂ ಸಮುದಾಯದ ವತಿಯಿಂದ ಆಯೋಜಿಸಿದ್ದ 76ನೇ ಸಂವಿಧಾನ ಜನ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕಿದೆ. ಆದರೆ, ಕೆಲವರು ಸಂವಿಧಾನವನ್ನು ವಿರೋಧಿಸುತ್ತಾರೆ. ಸಂವಿಧಾನವನ್ನು ಪ್ರತಿಯೊಬ್ಬರೂ ಸಹ ರಕ್ಷಿಸಬೇಕು ಎಂದರು.

ಸಂವಿಧಾನ ನಮಗೆ ಶಕ್ತಿ, ಬಲ, ಧೈರ್ಯ ಮತ್ತು ಆಶ್ರಯ ನೀಡಿದೆ. ಹಾಗಾಗಿ ಪ್ರತಿನಿತ್ಯ ಸಂವಿಧಾನವನ್ನು ನಾವು ಗೌರವಿಸಬೇಕು. ಕೆಲವರು ಹಿಂದು ರಾಷ್ಟ್ರವನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಅದು ಸಾಧ್ಯವಿಲ್ಲ. ಏಕೆಂದರೆ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದರು.

ಪತ್ರಕರ್ತ ಚಿಂತನ್ ಮಾತನಾಡಿ, ಮೂಢನಂಬಿಕೆ ಹಾಗೂ ಮೌಢ್ಯಕ್ಕೆ ಯಾರೂ ಬಲಿಯಾಗಬೇಡಿ. ಎಲ್ಲರೂ ಪ್ರಜ್ಞಾವಂತರೇ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನವನ್ನು ಆಶ್ರಯಿಸಿ ಅದರಂತೆ ನಡೆಯಬೇಕು. ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದರೆ ಈ ದೇಶ ಅಭಿವೃದ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ. ಹಾಗಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದರು.

ಈ ವೇಳೆ ಮುಸ್ಲಿಂ ಹೆಣ್ಣುಮಕ್ಕಳು ಸಂವಿಧಾನ ಪೀಠಿಕೆ ಪ್ರಸ್ತಾವನೆಯನ್ನು ಓದಿದರು. ಇದರ ಜತೆಗೆ ಡಾ.ಬಿ ಆರ್.ಅಂಬೇಡ್ಕರ್ ಅವರ ಗೀತೆಗಳು ಹಾಡಿದರು.

ಕಾರ್ಯಕ್ರಮದಲ್ಲಿ ದಲಿತ ಮತ್ತು ಮೈನಾರಿಟಿ ಸೇನೆ ರಾಜ್ಯಾಧ್ಯಕ್ಷ ಎ.ಜೆ.ಖಾನ್, ಹಿರಿಯ ಧರ್ಮಗುರು ಅಬ್ದುಲ್ ತವಾಬ್, ಅಂಬೇಡ್ಕರ್ ವಾದಿ ಮಹದೇವ್ ಕುಮಾರ್, ಮುಖಂಡ ಮಹಮ್ಮದ್ ಮತೀನ್, ಮಹಮ್ಮದ್ ರಫೀಕ್, ಆಸೀಫುಲ್ಲಾ, ಸೈಯದ್ ಎಜಾಜ್, ಇರಾಫ್ ಪಾಷಾ, ಆರಿಫುಲ್ಲ, ನಾಜಿಂ ಖಾನ್, ರಿಜ್ವಾನ್, ಇಮ್ರಾನ್ ಟಿಪ್ಪು, ಜಕಾಉಲ್ಲಾ, ಜೊಯೆಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net