

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಬಾಲನ್ಯಾಯ ಮಂಡಲಿಯ ಸರಸ್ವತಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಲತಾ ಮಾತನಾಡಿ, ಹೆಣ್ಣು ಮಕ್ಕಳು ಧೈರ್ಯದಿಂದ ತಮ್ಮ ಸಮಸ್ಯೆಗಳನ್ನು ತಾವೇ ಗುರುತಿಸಿ ಬಗೆಹರಿಸುವಂತಾಗಬೇಕು, ಬಾಲ್ಯ ವಿವಾಹ ಅಥವಾ ಪ್ರೀತಿಯ ಪ್ರಕರಣಗಳಲ್ಲಿ ಗಂಡು ಮಕ್ಕಳಿಗೆ ಶಿಕ್ಷೆ ಆಗುತ್ತಿದ್ದು ಇಂತಹ ಸಂದರ್ಭಗಳಲ್ಲಿ ಹುಡುಗರು ಭವಿಷ್ಯವನ್ನೇ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಆದ್ದರಿಂದ ತಾವು ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನವನ್ನು ನೀಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಆರ್‌ಎಲ್‌ಎಚ್‌ಪಿ ಗ್ರಾಮೀಣ ಪ್ರದೇಶದಲ್ಲಿ ನೀಡಿದ್ದ ಕಂಪ್ಯೂಟರ್ ತರಬೇತಿಯ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು. ಆಟೋಟಗಳಲ್ಲಿ ಭಾಗವಹಿಸಿದ್ದ ಕಿಶೋರಿಯರಿಗೆ ಬಹುಮಾನ ವಿತರಿಸಲಾಯಿತು.
ಬಾಲನ್ಯಾಯ ಮಂಡಳಿ ಸದಸ್ಯ ಗಂಗಾಧರ ಸ್ವಾಮಿ, ಪೊಲೀಸ್ ಇಲಾಖೆಯ ನವೀನ್, ಪದ್ಮನಾಭ, ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್ ಇತರರು ಇದ್ದರು.