

ಬಳ್ಳಾರಿ : ಬಾಲಕಿಯರ ಶಿಕ್ಷಣವು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಬಲ್ಲದು ಎಂದು ಶಾಸಕ ನಾರಾ ಭರತ್ ರೆಡ್ಡಿ ಪ್ರತಿಪಾದಿಸಿದರು.
ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಗುರುವಾರ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ, ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಿಯರು ಧೈರ್ಯವನ್ನು ಕಲಿಯಬೇಕು. ಸಾಧನೆಯ ಹಾದಿಯಲ್ಲಿ ಅವಘಡಗಳು ಸಾಮಾನ್ಯ. ಆದರೆ ಅವುಗಳನ್ನು ಮೀರಿ ನಡೆಯುವ ಸಾಹಸ ನಿಮ್ಮದಾಗಬೇಕು ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಜ್ಞಾನ ಇಂದು ಜಗತ್ತನ್ನು ಆಳುತ್ತಿದೆ. ಕಾಲೇಜಿನ ಕಾಲದಲ್ಲಿ ಸಣ್ಣ ಹುಡುಗಾಟ ಇರಬಹುದು. ಆದರೆ ಅದೇ ಶಿಕ್ಷಣ ಅಲ್ಲ. ಜವಾಬ್ದಾರಿಯನ್ನು ಅರಿತು ನೀವು ಓದಿ, ಉನ್ನತ ಹುದ್ದೆಗಳನ್ನು ಗಳಿಸಬೇಕು. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ವಿಷಯದಲ್ಲಿ ಅಗಾಧವಾದ ಸಾಧನೆ ಮಾಡಿ ಐಎಎಸ್, ಐಪಿಎಸ್‌ನಂತಹ, ಡಾಕ್ಟರ್, ಇಂಜಿನಿಯರ್‌ನಂತಹ ಹುದ್ದೆಗಳಿಗೆ ಅರ್ಹರಾಗಲು ತಿಳಿಸಿದರು.
ಸಮಾಜ ದಿನದಿಂದ ದಿನಕ್ಕೆ ವೈವಿಧ್ಯಮಯವಾಗುತ್ತಿದೆ. ಇದಕ್ಕೆ ಪೂರಕವಾದ ಕೋರ್ಸ್‌ಗಳು ಲಭ್ಯವಿವೆ. ಅವುಗಳನ್ನು ಓದಿ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಬಿ.ಸುಲೇಖಾ, ಬಾಲಕಿಯರು ಶಿಕ್ಷಣ ಪಡೆದರೆ ನಿಜವಾದ ಅರ್ಥದಲ್ಲಿ ದೇಶದ ಶಕ್ತಿಯೇ ಆಗುತ್ತಾರೆ. ಬಾಲಕಿಯರಿಗೆ ಈ ಹೊತ್ತಲ್ಲಿ ಅನೇಕ ಅವಕಾಶಗಳಿವೆ ಎಂದರು.
ಇದೇ ವೇಳೆ ಕಳೆದ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆಯರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಕಾಲೇಜಿನ ಅಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.