

ಬಾಳೆಹೊನ್ನೂರು: ಹೆಣ್ಣು ಮಕ್ಕಳು ಶಾಲಾ ಕಾಲೇಜು ದಿನಗಳಲ್ಲಿ ದೃಢವಾದ ಮನಸ್ಸನ್ನು ಹೊಂದಿರುವುದು ಅಗತ್ಯ ಎಂದು ಎನ್.ಆರ್.ಪುರ ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ ಪ್ರಭಾಕರ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಹದಿ ಹರೆಯದ ಸಮಸ್ಯೆ ಮಾಹಿತಿ ಹಾಗೂ ಹೆಣ್ಣು ಮಕ್ಕಳ ಆತ್ಮವಿಶ್ವಾಸ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಯಾವುದೇ ವಿಚಾರಗಳಲ್ಲಿ ಅಂಜಿಕೆ ಹೊಂದದೆ ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಎಲ್ಲ ವಿಚಾರಗಳನ್ನು ಯಶಸ್ಸು ಸಾಧಿಸಲು ಸಾಧ್ಯವಿದೆ. ಕಿರಿಯ ವಯಸ್ಸಿನಲ್ಲಿ ಹಲವು ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪಾಕರು,ಶಿಕ್ಷಕರು, ವೈದ್ಯರ ಬಳಿ ಮುಚ್ಚು ಮರೆ ಇಲ್ಲದೆ ಹೇಳಿಕೊಂಡಲ್ಲಿ ಅವುಗಳಿಗೆ ಪರಿಹಾರ ಸಾಧ್ಯವಿದೆ ಎಂದರು.
ಸಮಾಜದಲ್ಲಿ ಇಂದು ಹೆಣ್ಣಿಗೆ ಅಗ್ರ ಸ್ಥಾನವಿದ್ದು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟಿದ್ದಾಳೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಮುನ್ನಡೆಯಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯೆ ಶಶಿಕಲಾ, ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ವಿ.ಅಶೋಕ, ಪೂರ್ವಾಧ್ಯಕ್ಷ ಸುಧಾಕರ್, ಚೈತನ್ಯ ವೆಂಕಿ, ದಯಾಕರ್, ರಿಚರ್ಡ್ ಮಥಾಯಿಸ್, ಸದಸ್ಯರಾದ ಚೇತನ್, ಡಿ.ರಾಜೇಂದ್ರ ಮತ್ತಿತರರು ಹಾಜರಿದ್ದರು.