

ಮಡಿಕೇರಿ: ಮಡಿಕೇರಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಿಲಯದ ವಾರ್ಷಿಕೋತ್ಸವ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಡಿಕೇರಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಕಳೆದ ೩೦ ವರ್ಷಗಳಿಂದ ಡಿಎಸ್‌ಎಸ್, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಕೂಡ ಇಂತಹ ಸನ್ಮಾನಕ್ಕೆ ಭಾಜನಾರಾಗಬೇಕು ಎಂದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಶಿಕ್ಷಣದಲ್ಲಿರುವ ಹಂತಗಳು, ವಿವಿಧ ಕೋರ್ಸ್‌ಗಳನ ಬಗ್ಗೆ ಹಾಗು ಡಿಎಸ್‌ಎಸ್ ನಡೆಸುವ ಶೈಕ್ಷಣಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಾದದ್ದು ಇಂದಿನ ಮೊದಲ ಆದ್ಯತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಲಕೃಷ್ಣ ರೈ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಗುರಿಯನ್ನು ಮುಂದಿಟ್ಟುಕೊಂಡು ಕಲಿಕೆ ಮುಂದುವರೆಸಬೇಕು. ಇಲಾಖೆಯಲ್ಲಿ ಬಹಳಷ್ಟು ಸೌಲಭ್ಯಗಳಿದ್ದು ಅದರ ನೆರವನ್ನು ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ಸಂಯೋಜಕಿ ಡಾ.ಎಚ್.ಕೆ.ರೇಣುಶ್ರೀ, ಮಡಿಕೇರಿಯ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದೀಪಕ್ ಪೋನ್ನಪ್ಪ, ಪತ್ರಕರ್ತ ಚಂದನ್ ನಂದರಬೆಟ್ಟು, ಮಡಿಕೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದ ಮೇಲ್ವಿಚಾರಕಿ ನಾಗರತ್ನ, ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಸಿಂಧು ಹಾಗೂ ಜ್ಯೋತಿ, ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶಂಭು, ಕರಾಟೆ ತರಬೇತುಗಾರ್ತಿ ಶಾರದ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.