

ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಹಾಡಹಗಲೇ ಜನನಿಬಿಡ ಸ್ಥಳದಲ್ಲಿ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಪ್ರೇಮಿಯನ್ನು ಹಿಡಿದು ಸಾರ್ವಜನಿಕರು ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯ ಚೇತನ್(29) ಚಾಕುವಿನಿಂದ ಇರಿದ ಭಗ್ನ ಪ್ರೇಮಿ. ಅದೇ ಗ್ರಾಮದ ಅಂಬಿಕಾ(22) ಚಾಕು ಇರಿತಕ್ಕೆ ಒಳಗಾಗಿದ್ದಾಳೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಯುವತಿ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಆ ಬಳಿಕ ಅಂಬಿಕಾ, ಚೇತನ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಚೇತನ್ ಮಂಗಳವಾರ ಮಧ್ಯಾಹ್ನ ಶಿವಪ್ಪ ನಾಯಕ ವೃತ್ತದಲ್ಲಿ ಅಂಬಿಕಾಳನ್ನು ಕಂಡು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ. ಈ ವೇಳೆ ಸುತ್ತಮುತ್ತ ಇದ್ದ ಸಾರ್ವಜನಿಕರು ಚೇತನ್‌ನನ್ನು ಹಿಡಿದು ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂಬಿಕಾಳನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಚೇತನ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.