

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿನಿಯರು ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕಲಿತುಕೊಂಡು ಸದೃಢರಾಗಬೇಕಾಗಿದೆ. ಸ್ವಯಂ ರಕ್ಷಣೆ ಕೌಶಲ್ಯ ಅರಿತಿದ್ದಾಗ ಮಾತ್ರ ಧೈರ್ಯದಿಂದ ಓಡಾಡಬಹುದಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಶಕುಮಾರ ತಿಳಿಸಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿರುವ ಸ್ವಯಂ ಆತ್ಮ ರಕ್ಷಣಾ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಮಾತನಾಡಿ, ಕರಾಟೆ, ಮಾರ್ಷಲ್ ಆರ್ಟ್‌ಗಳನ್ನು ಕಲಿಯರು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಎನ್‌ಎಸ್‌ಎಸ್ ಯೋಜನಾಕಾರಿ ಡಾ.ಸಂತೋಷಕುಮಾರ ರೇವೂರ ಮಾತನಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕ ಕಲಿಕೆ ಮತ್ತು ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ಧೇಶಿಸಲಾಗಿದೆ. ರಕ್ಷಣಾ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯೆ ಡಾ.ಪುಷ್ಪಾ ಮಾತನಾಡಿ, ಸ್ವಯಂ ರಕ್ಷಣಾ ತರಬೇತಿ ಶಿಬಿರ ಅತ್ಯಂತ ಸಮಯೋಚಿತವಾಗಿದ್ದು, ವಿದ್ಯಾರ್ಥಿನಿಯರಿಗೆ ಅದರ ಅವಶ್ಯಕತೆಯಿದೆ. ಎನ್‌ಎಸ್‌ಎಸ್‌ನಿಂದ ಕಾಲೇಜಿನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಸುಗಣಾ ಬಸವರಾಜ, ಡಾ.ಸೈಯಿದಾ ಪರ್ವೀನ್, ಡಾ.ಪ್ರಸನ್ನಕುಮಾರ, ಗ್ರಂಥಪಾಲಕ ಡಾ.ಸುರೇಶ ಪಾಟೀಲ್, ಕರಾಟೆ ಪಟು ಮಂಜುಳಾ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.