

ಬೆಂಗಳೂರು: ಟೆಕ್ ಹಬ್ ಎಂದೇ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ( Traffic Jam ) ಅನ್ನೋದು ಸರ್ವೇ ಸಾಮಾನ್ಯ. ಬೆಂಗಳೂರಿಗರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಬಹಳ ಹೊತ್ತು ಪರದಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತನ್ನ ಸ್ನೇಹಿತೆಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಫುತ್ಪಾತ್ನಲ್ಲಿ ಕೆಲವರು ಕುಣಿಯುವುದನ್ನು ನೋಡಿ ಯುವತಿ ಆಟೋ ಇಳಿದು ಅವರೊಂದಿಗೆ ಸೇರಿ ಸೊಂಟ ಬಳುಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹುಡುಗಿಯ ಹೆಸರು ಶರಣ್ಯ ಮೋಹನ್. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಡಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ಆಕೆ ಕೂಲ್ ಆಗಿ, ತನ್ನದೇಯಾದ ಸ್ಟೈಲ್‌ನಲ್ಲಿ ಇತರ ಜನರೊಂದಿಗೆ ರಸ್ತೆಬದಿಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕುಣಿದು ಕುಪ್ಪಳಿಸಿದ್ದಾಳೆ.
ಟ್ರಾಫಿಕ್ ಜಾಮ್‌ನಿಂದಾಗಿ ನಿಂತಿದ್ದ ಆಟೋದಲ್ಲಿ ಸ್ನೇಹಿತೆಯೊಂದಿಗೆ ಕುಳಿತಿದ್ದ ಶರಣ್ಯ, ತನ್ನ ಫೋನ್ ಅನ್ನು ತನ್ನ ಸ್ನೇಹಿತೆಯ ಕೈಗೆ ಕೊಟ್ಟು, ಆಟೋದಿಂದ ಕೆಳಗಿಳಿದು ಫುಟ್ಪಾತ್ನಲ್ಲಿ ಡಾನ್ಸ್ ಮಾಡುತ್ತಿದ್ದ ಜನರತ್ತ ಹೋಗಿ, ಅವರೊಂದಿಗೆ ತಾನೂ ಸೇರಿಕೊಂಡು ಡಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮತ್ತೊಂದೆಡೆ ಪುಟ್ಪಾತ್ನಲ್ಲಿ ಕುಣಿಯುತ್ತಿದ್ದವರು ಕೂಡ ಆಕೆಯನ್ನು ಸ್ವಾಗತಿಸಿ, ಸ್ಟೆಪ್ ಹಾಕಿದರು. ಹೀಗಾಗಿ ಶರಣ್ಯಾ ಅವರೊಂದಿಗೆ ಉತ್ಸಾಹದಿಂದ ಕುಣಿದರು. ಟ್ರಾಫಿಕ್ ಕ್ಲಿಯರ್ ಆದ ಮೇಲೆ ಶರಣ್ಯಾ ಡಾನ್ಸ್ ಬಿಟ್ಟು ಮತ್ತೆ ಆಟೋ ಏರಿದರು.
ಈ ಎಲ್ಲ ವರ್ಷಗಳಲ್ಲಿ ಬೆಂಗಳೂರು ನನ್ನನ್ನು ವಿಸ್ಮಯಗೊಳಿಸುವುದರಲ್ಲಿ ಎಂದಿಗೂ ವಿಫಲವಾಗುವುದಿಲ್ಲ ಮತ್ತು ನಾನು ಕಾಲಕಾಲಕ್ಕೆ ಅನನ್ಯ ಅನುಭವಗಳನ್ನು ಇಲ್ಲಿ ಹೊಂದಿದ್ದೇನೆ. ನನ್ನ ಮನೆಯಿಂದ ದೂರವಿದ್ದರೂ ನನ್ನ ಮನೆಯಂತಿರುವ ಮತ್ತು ನನ್ನ ಜೀವನದಲ್ಲಿ ಆರೋಗ್ಯಕರ ಅನುಭವಗಳನ್ನು ನೀಡಿದ ಬೆಂಗಳೂರಿಗೆ ಧನ್ಯವಾದಗಳು ಎಂದು ಶರಣ್ಯಾ ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಏಳೇ ದಿನದಲ್ಲಿ 37 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 23 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಆ ಯುವತಿಯು ಜೀವಿಸುತ್ತಿರುವ ರೀತಿ ತುಂಬಾ ಇಷ್ಟವಾಗುತ್ತದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಯುವತಿಯ ಡಾನ್ಸ್ ನೋಡಿ ಹುಡುಗರ ಎನರ್ಜಿ ಕೂಡ ಹೆಚ್ಚಾಯಿತು ಎಂದಿದ್ದಾರೆ. ಬೆಂಗಳೂರಿನಲ್ಲಿ ನಾನು ಇದುವರೆಗೂ ನೋಡಿದ ಅತ್ಯುತ್ತಮ ರೀಲ್ಸ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದು, ಶರಣ್ಯಾ ಒಂದೇ ಒಂದು ವಿಡಿಯೋದಿಂದ ಬೆಂಗಳೂರಿಗರ ಮನಗೆದ್ದಿದ್ದಾರೆ. ಸದ್ಯ ಶರಣ್ಯಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 17 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.