ಸ್ಥಳೀಯರ ಸಮಯಪ್ರಜ್ಞೆಯಿಂದ ಯುವತಿಗೆ ಮರುಜನ್ಮ! ಬಾರ್ಕೂರಿನಲ್ಲಿ ಅಪಘಾತ

choulikereee
Published on

ಉಡುಪಿ/ಬ್ರಹ್ಮಾವರ: ಬಾರ್ಕೂರಿನ ರಸ್ತೆಬದಿಯ ಕೆರೆಗೆ ಭಾನುವಾರ ಮಧ್ಯಾಹ್ನ ಕಾರು ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ಜತೆಗಿದ್ದ ಇವರ ಪ್ಲೈವುಡ್ ಸಂಸ್ಥೆಯ ಉದ್ಯೋಗಿ ಶ್ವೇತಾ ಪವಾಡಸದೃಶ ರೀತಿ ಬಚಾವಾಗಿದ್ದಾರೆ. ಅಪಘಾತಕ್ಕೀಡಾಗಿದ್ದ ಈ ಯುವತಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿಯುವಂತಾಗಿದೆ.

ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಕಿಟಕಿ ತೆರೆಯಲಾಗದೆ ಇಬ್ಬರೂ ನೀರಿನಲ್ಲಿ ಮುಳುಗಿದ್ದರು. ಅಪಘಾತದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು 407 ಟೆಂಪೋಗೆ ಹಗ್ಗ ಕಟ್ಟಿ ಕಾರನ್ನು ಮೇಲಕ್ಕೆತ್ತಿದ್ದರು. ಸಂತೋಷ್ ಶೆಟ್ಟಿಯವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಆದರೆ ಯುವತಿ ಪ್ರಾಥಮಿಕ ಚಿಕಿತ್ಸೆಗೆ ಸ್ಪಂದಿಸಿ, ನಂತರ ಆಸ್ಪತ್ರೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬಾಲಕಿಯ ಸಮಯಪ್ರಜ್ಞೆ: ಕಲಿತ ವಿದ್ಯೆ ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬುದಕ್ಕೂ ಈ ಘಟನೆ ಸಾಕ್ಷಿಯಾಗಿದೆ. 15 ವರ್ಷದ ಬಾಲಕಿಯೊಬ್ಬಳ ಸಮಯಪ್ರಜ್ಞೆಯಿಂದ ಶ್ವೇತಾ ಬದುಕಿದ್ದಾರೆ. ಬ್ರಹ್ಮಾವರದ ಶಾಲೆಯ 10 ತರಗತಿ ವಿದ್ಯಾರ್ಥಿನಿ ನಮನಾ ತಾನು ಶಾಲೆಯಲ್ಲಿ ಹಾಗೂ ಎನ್‌ಸಿಸಿ ಶಿಬಿರದಲ್ಲಿ ಕಲಿತಿದ್ದ ಪ್ರಾಥಮಿಕ ಚಿಕಿತ್ಸಾ ವಿಧಾನವನ್ನು ಪ್ರಯೋಗಿಸಿ ಯುವತಿಯ ಉಸಿರು ಮರಳುವಂತೆ ಮಾಡಿದ್ದಾರೆ. ಇದಕ್ಕೆ ಸ್ಥಳೀಯರೂ ಸಾಥ್ ನೀಡಿದ್ದಾರೆ. ಈ ಸಾಹಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಮೆಚ್ಚುಗೆಯೂ ಲಭಿಸಿದೆ.

ಶ್ವೇತಾಳನ್ನು ಮೇಲಕ್ಕೆತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಈ ಬಾಲಕಿ ಮಾಡಿದ್ದಾರೆ. ನೀರು ಕುಡಿದು ಜೀವಚ್ಛವದಂತಾಗಿದ್ದ ಯುವತಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೀರನ್ನು ಪ್ರಥಮ ಚಿಕಿತ್ಸೆ ಮೂಲಕ ಹೊರಹಾಕಿಸಿದ ಬಳಿಕ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ನಮನಾಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡದಿದ್ದರೆ ಜೀವಕ್ಕೇ ಅಪಾಯವಾಗುತ್ತಿತ್ತು. ನಮನಾ ಹಿರಿಯ ಉಪನ್ಯಾಸಕಿ, ಎನ್‌ಎಸ್‌ಎಸ್ ಅಧಿಕಾರಿ ಸವಿತಾ ಎರ್ಮಾಳ್-ಕುಮಾರ್ ದಂಪತಿ ಪುತ್ರಿ.

ಪೊಲೀಸರಿಂದ ತಾತ್ಕಾಲಿಕ ತಡೆಗೋಡೆ: ಚೌಳಿಕೆರೆ ಪ್ರದೇಶದಲ್ಲಿ ಪದೇಪದೆ ದುರ್ಘಟನೆಗಳು ಸಂಭವಿಸುತ್ತಿದ್ದು, ಬ್ರಹ್ಮಾವರ ಪೋಲಿಸರು ಸೋಮವಾರ ರಸ್ತೆಯ ಪಕ್ಕದಲ್ಲಿ ಕಲ್ಲು ಕಂಬಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದಾರೆ.

ಕೆರೆಯಿಂದ ಕಾರನ್ನು ಮೇಲೆತ್ತಿ ಯುವತಿಗೆ ಪಂಪಿಂಗ್ ಮಾಡಿದೆ. ಆಕೆ ಸ್ವಲ್ಪ ಚೇತರಿಸಿಕೊಂಡ ನಂತರ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರಿನಲ್ಲಿದ್ದ ಪುರುಷ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಈ ಭಾಗದಲ್ಲಿ ಪದೇಪದೆ ಅಪಘಾತ ಸಂಭವಿಸುತ್ತಿದ್ದು, ತಡೆಗೋಡೆ ಅಗತ್ಯ. ರಸ್ತೆ ತಿರುವಿನ ಎರಡೂ ಭಾಗದಲ್ಲಿ ಹಂಪ್‌ಗಳನ್ನು ಅಳವಡಿಸಬೇಕು.

- ನಮನಾ, ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net