ಬಾಲಕಿ ಅಪಹರಣ, ಆರೋಪಿ ಬಂಧನಕ್ಕೆ ಆಗ್ರಹ

kidnap
Published on

ಉಡುಪಿ: ಪೆರ್ಡೂರಿನ ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಶನಿವಾರ ಹಿಂದು ಸಂಘಟನೆ ಕಾರ್ಯಕರ್ತರು ಹಿರಿಯಡ್ಕ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.

17 ವರ್ಷದ ಪ್ರಥಮ ಪದವಿ ವಿದ್ಯಾರ್ಥಿನಿಯನ್ನು ಅನ್ಯಕೋಮಿನ ಯುವಕ ಅ.28ರಂದು ಅಪಹರಣ ಮಾಡಿರುವ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ದಿನ ಕಳೆದರೂ ಬಾಲಕಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಘಟನೆಯ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಯುವತಿಯರನ್ನು ರಾಷ್ಟ್ರ ವಿರೋಧಿ ಕೃತ್ಯಕ್ಕೆ ಬಳಸಿಕೊಳ್ಳುವ ಬಗ್ಗೆ ಅನುಮಾನವಿದೆ. ಹೀಗಾಗಿ ಇಲಾಖೆ ತನಿಖೆ ಚುರುಕುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಜೈ ಶಂಕರ್, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ಫೂಟೇಜ್ ಈಗಾಗಲೇ ಲಭ್ಯವಾಗಿದೆ. ಆರೋಪಿಯ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿದೆ. ಶೀಘ್ರ ಬಂಧಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ನಾಯಕ ಯಶ್‌ಪಾಲ್ ಸುವರ್ಣ, ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಸುನೀಲ್ ಕೆ.ಆರ್., ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಹಿಂದು ಜಾಗರಣ ವೇದಿಕೆ ವಿಭಾಗ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಗ್ರಾಮಾಂತರ ಕಾರ್ಯದರ್ಶಿ ಗಿರೀಶ್ ಹಿರಿಯಡ್ಕ, ಗ್ರಾಮಾಂತರ ಸಂಚಾಲಕ ಅನಿಲ್ ಅತ್ರಾಡಿ, ಸುರೇಶ್ ಮೆಂಡನ್, ಮಹೇಶ್ ಬೈಲೂರು, ಮಾತೃಶಕ್ತಿಯ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net