

ಬೆಂಗಳೂರು: ಬಂಡೆಪಾಳ್ಯದಲ್ಲಿ ಮನೆ ಮುಂದೆ ಒಣಗಿ ಹಾಕಿದ್ದ ಬಟ್ಟೆ ತೆಗೆದುಕೊಳ್ಳುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಒಂಭತ್ತು ವರ್ಷದ ಬಾಲಕಿ ಗಾಯೊಗೊಂಡಿದ್ದಾಳೆ.
ಮಂಗಮ್ಮನಪಾಳ್ಯ ನಿವಾಸಿ ಇರ್ಫಾನ್ ಅವರ ಪುತ್ರಿ ರೊಯಾ(೯) ಗಾಯಗೊಂಡ ಬಾಲಕಿ. ಸದ್ಯ ಆಕೆ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇರ್ಫಾನ್ ನಗರದಲ್ಲಿ ಪಿಠೋಪಕರಣಗಳ ರಿಪೇರಿ ಕೆಲಸ ಮಾಡಿಕೊಂಡಿದ್ದು, ಕುಟುಂಬದ ಜತೆ ಮಂಗಮ್ಮನಪಾಳ್ಯದಲ್ಲಿ ೨ ನೇ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಬಾಲಕಿ ಮನೆ ಮುಂದೆ ಒಣಗಿ ಹಾಕಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋಗಿದ್ದಾಳೆ. ಈ ವೇಳೆ ಮನೆ ಮುಂದೆ ಹಾದು ಹೋಗಿದ್ದ ಬೆಸ್ಕಾಂನ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಸುಟ್ಟ ಗಾಯಗಳಿಂದ ಅಸ್ವಸ್ಥವಾಗಿ ಕೆಳಗೆ ಬಿದ್ದಿದ್ದಳು. ಕೆಲ ಹೊತ್ತಿನ ಬಳಿಕ ಅದನ್ನು ಗಮನಿಸಿದ ಕುಟುಂಬ ಸದಸ್ಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೆರೆದೊಯ್ದದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಶೇ.೨೦ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಈ ಮಾಹಿತಿ ದೊರೆತ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸದ್ಯ ಬಾಲಕಿ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ಬಂಡೆಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.