

ಮಂಡ್ಯ: ಪಠ್ಯದ ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂದಿರುವ ಬಾಲಕಿ ಮೂಳೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಜೀವ ಉಳಿಸಿಕೊಳ್ಳಬೇಕಾದರೆ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಚಿಕಿತ್ಸೆ ಅಗತ್ಯವಿದೆ. ಕೂಲಿ ಮಾಡಿಕೊಂಡು ಬದುಕು ನಡೆಸುತ್ತಿರುವ ತಾಯಿ, ತನ್ನ ಮಗಳನ್ನು ಉಳಿಸಿಕೊಳ್ಳಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಂಗಪಟ್ಟಣ ತಾಲೂಕು ಬಲ್ಲೇನಹಳ್ಳಿ ಗ್ರಾಮದ ಹೇಮಾ, ಕಳೆದ ಎರಡು ತಿಂಗಳಿಂದ ನನ್ನ ಮಗಳು ವಿನುತಾ ಮೂಳೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ವೈದ್ಯರು ದೀರ್ಘಾವಧಿ ಚಿಕಿತ್ಸೆಯ ಜತೆಗೆ ಆರೈಕೆಗೆ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ರೂ ಅಗತ್ಯವಿದೆ. ನಮ್ಮ ಕುಟುಂಬಕ್ಕೆ ಯಾವುದೇ ಆಸ್ತಿ ಅಥವಾ ಆದಾಯದ ಮೂಲಗಳಿಲ್ಲ. ಮನೆಗೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು.
ಪ್ರಸ್ತುತ ಬೆಂಗಳೂರಿನ ನಾರಾಯಣ ಹೃದಾಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತಿದೆ. 9 ಕಿಮೋಥೆರಪಿ ಮಾಡಿಸಬೇಕೆಂದು ವೈದ್ಯರು ಸೂಚನೆ ನೀಡಿದ್ದಾರೆ. ಈಗಾಗಲೇ 2 ಕಿಮೋಥೆರಪಿ ಮಾಡಿಸಲಾಗಿದೆ. ಬಸ್, ರೈಲಿನಲ್ಲಿಯೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಪ್ರತಿ ಬಾರಿ ಚಿಕಿತ್ಸೆಗೆ ಹೋದಾಗಲೂ ಕನಿಷ್ಟ ಐದು ಸಾವಿರ ರೂ ಅಗತ್ಯವಿದೆ. ನನ್ನ ಮಗಳ ಜೀವ ಉಳಿಸಿಕೊಳ್ಳಲು ನೆರವು ನೀಡುವಂತೆ ಮನವಿ ಮಾಡಿಕೊಂಡರು.
ಶ್ರೀರಂಗಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ನಮ್ಮ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿನುತಾ ಕಲಿಕೆಯಲ್ಲಿ ಮುಂದಿದ್ದಾಳೆ. ಪಠ್ಯೇತರ ಚಟುವಟಿಕೆಯಲ್ಲಿಯೂ ಕ್ರಿಯಾಶೀಲವಾಗಿದ್ದಾಳೆ. ಆದರೆ ಅಷ್ಟೊಂದು ಚಟುವಟಿಕೆಯಾಗಿದ್ದ ಆಕೆ ಕಾಯಿಲೆಯಿಂದ ಬಳಲುತ್ತಿರುವ ವಿಷಯ ನಮಗೆ ದಿಗ್ಬ್ರಮೆ ಮೂಡಿಸಿದೆ. ಈಗಾಗಲೇ ಶಿಕ್ಷಣ ಇಲಾಖೆ ಸೇರಿದಂತೆ ಹಲವರಿಗೆ ಮನವಿ ಮಾಡಲಾಗಿದೆ. ದಾನಿಗಳು ಹಾಗೂ ಸಂಘ ಸಂಸ್ಥೆಗಳು ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿನಿ ವಿನುತಾ ಇದ್ದರು.
ನೆರವು ನೀಡುವವರು ಶ್ರೀರಂಗಪಟ್ಟಣ ಕರ್ನಾಟಕ ಬ್ಯಾಂಕ್, ಖಾತೆ ಸಂಖ್ಯೆ 7092500101895101 ಹಾಗೂ ಐಎಫ್‌ಎಸ್‌ಸಿ ಕೋಡ್ KARB0000709 ಹಾಗೂ ಗೂಗಲ್ ಪೇ, ಫೋನ್ ಪೇ ಸಂಖ್ಯೆ 7090221842 ಹಣ ಕಳುಹಿಸಬಹುದು.