ಟ್ರಾೃಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಬಾಲಕಿ ಸಾವು

Published on

ಕೊಳ್ಳೇಗಾಲ : ತಾಲೂಕಿನ ಚಿಲಕವಾಡಿ ಗ್ರಾಮದ ರಸ್ತೆಯಲ್ಲಿ ನಿಂತಿದ್ದ ಅಪರಿಚಿತ ಟ್ರಾೃಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ 4 ವರ್ಷದ ಮಗು ಮೃತಪಟ್ಟು, ದಂಪತಿ ಗಾಯಗೊಂಡಿದ್ದಾರೆ.

ತಾಲೂಕಿನ ಗುಂಡೇಗಾಲ ಗ್ರಾಮದ ನಿವಾಸಿ ನಂಜುಂಡಸ್ವಾಮಿ, ಕಾವ್ಯಾ ಗಾಯಗೊಂಡವರು. ಇವರ ಮಗಳಾದ ಹರ್ಷಿತಾ ನಾಯಕ (4) ಮೃತಪಟ್ಟ ಬಾಲಕಿ. ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ನಂಜುಂಡಸ್ವಾಮಿ ಕುಟುಂಬ ವಾಸವಿತ್ತು. ಮಂಗಳವಾರ ಸ್ವಗ್ರಾಮ ಗುಂಡೇಗಾಲಕ್ಕೆ ಬಂದು ವಾಪಸ್ ಮೈಸೂರಿಗೆ ಹೋಗುವಾಗ ಚಿಲಕವಾಡಿ ಗ್ರಾಮದ ರಸ್ತೆಯ ಬಳಿ ನಿಲ್ಲಿಸಿದ್ದ ಟ್ರಾೃಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಮೂವರು ಕೆಳಗಡೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಯಳಂದೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಬಾಲಕಿ ಹರ್ಷಿತಾ ನಾಯಕ ಮೃತಪಟ್ಟಿದ್ದಾಳೆ. ದಂಪತಿಗೆ ಚಿಕಿತ್ಸೆ ಮುಂದುವರಿದಿದೆ.

ಟ್ರಾೃಕ್ಟರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ, ಅಗರ ಮಾಂಬಳ್ಳಿ ಎಸ್‌ಐ ಕರಿಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮಗುವಿನ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಟ್ರಾೃಕ್ಟರ್ ಚಾಲಕನ ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net