

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆಗಳಿದ್ದು ಅದಕ್ಕೆ ಹೆತ್ತವರ ಹಾಗೂ ಸಮಾಜದ ಪ್ರೋತ್ಸಾಹ ಲಭಿಸಿದಾಗ ಸಾಧನೆ ಮಾಡಲು ಉತ್ಸಾಹ ಬರುತ್ತದೆ. ಅಲ್ಲದೆ, ಆಸಕ್ತಿ ಮತ್ತು ಸಮರ್ಪಣಾ ಭಾವ ಇದ್ದಾಗ ಯಾವುದೇ ಅಡೆತಡೆ ಇದ್ದರೂ ಅದನ್ನು ಎದುರಿಸಿ ಸಾಧನೆಯ ಶಿಖರ ಏರಲು ಸಾಧ್ಯ ಎಂದು 170 ತಾಸು ಭರತನಾಟ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿರುವ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅಭಿಪ್ರಾಯಪಟ್ಟರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್ನಲ್ಲಿ ಮಹಿಳಾ ಆಯೋಗ ಹಾಗೂ ಸ್ತ್ರೀ ಸಂಘಟನೆ ಸೆಪ್ಟೆಂಬರ್ 21ರಂದು ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ರೆಮೋನಾ ತೋರ್ಪಡಿಸಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೊ ಮೂಲಕ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಲಭಿಸುತ್ತಿದ್ದು ಅದರ ಪ್ರಯೋಜನ ಪಡೆಯಬೇಕು. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಹೆಣ್ಣು ಇಂದು ಎಲ್ಲ ರಂಗದಲ್ಲೂ ಮುಂದಿದ್ದಾಳೆ. ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಜಾ ಶುಭ ಹಾರೈಸಿದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚರ್ಚ್ನ ಹೆಣ್ಣು ಮಕ್ಕಳು ಸಮಾಜದಲ್ಲಿ ಮಹಿಳೆಯ ಸ್ಥಾನಮಾನ ಪರಿಚಯಿಸುವ ವಿವಿಧ ರೀತಿಯನ್ನು ನೃತ್ಯ, ಕಿರು ನಾಟಕಗಳ ಮೂಲಕ ಪ್ರದರ್ಶಿಸಿದರು.
ಸ್ಥಳೀಯ ಕಾನ್ವೆಂಟ್ನ ಸುಪೀರಿಯರ್ ಸಿಸ್ಟರ್ ಸುಷ್ಮಾ, ಚರ್ಚ್ನ ಪಾಲನಾ ಮಂಡಳಿಯ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್, ರೆಮೋನಾ ಪಿರೇರಾ ತಾಯಿ ಗ್ಲ್ಯಾಡಿಸ್ ಪಿರೇರಾ, ಹೆಣ್ಣು ಮಕ್ಕಳ ಪ್ರತಿನಿಧಿಗಳಾಗಿ ಶರ್ಲಿನ್ ಫೆರ್ನಾಂಡಿಸ್, ಅನೋರಾ ಫೆರ್ನಾಂಡಿಸ್, ಚರ್ಚ್ನ ಆಗ್ನೆಲ್ ಡಿಸೋಜಾ ಉಪಸ್ಥಿತರಿದ್ದರು.
ಸ್ತ್ರೀ ಸಂಘಟನೆಯ ಪ್ರಿಯಾ ರೊಡ್ರಿಗಸ್ ಸ್ವಾಗತಿಸಿದರು. ಶಾಂತಿ ಫೆರ್ನಾಂಡಿಸ್ ವಂದಿಸಿದರು.
ಹೆಣ್ಣಿಗೆ ಟೀಕೆಗಳು ಬರುವುದು ಸಹಜ. ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಹೆತ್ತವರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರದೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಬೇಕು. ಅದರಿಂದ ಸಾಧನೆ ತೋರಲು ಸಾಧ್ಯವಿದೆ. | ರೆಮೋನಾ ಇವೆಟ್ ಪಿರೇರಾ. ನೃತ್ಯ ಕಲಾವಿದೆ.