ಇಲಿ ಪಾಷಾಣ ತಿಂದು ಹೆಣ್ಣು ಮಗು ಸಾವು

Shreya
Published on

ನೆಲ್ಯಾಡಿ: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ ಶ್ರೇಯಾ ಮೃತಪಟ್ಟ ಮಗು. ಜೂ.19ರಂದು ಬೆಳಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಅದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ ಮಾಡುತ್ತಿದ್ದಂತೆ ಮಗು ಆಟವಾಡುತ್ತ ಬಂದು ಇಲಿ ಪಾಷಾಣ ತಿಂದಿದೆ. ಮಧ್ಯಾಹ್ನದ ವೇಳೆ ಮಗುವಿಗೆ ವಾಂತಿ ಆರಂಭಗೊಂಡಿದ್ದು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಜೂ.20ರಂದು ಬೆಳಗ್ಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net