

ವಿಜಯವಾಣಿ ಸುದ್ದಿಜಾಲ ಉಡುಪಿ
ಭೂಮಿತಾಯಿ ಹೆಣ್ಣು, ಜನ್ಮ ಕೊಟ್ಟ ತಾಯಿ ಹೆಣ್ಣು, ಹೆಂಡತಿಯಾಗಿ ಬರುವವಳು ಹೆಣ್ಣು, ಮಗಳಾಗಿ ಹುಟ್ಟುವವಳು ಹೆಣ್ಣು. ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ಅತಿಮುಖ್ಯ. ಹೀಗಿರುವಾಗ ಹೆಣ್ಣು ಮಗು ಹುಟ್ಟುವುದು ಶಾಪವಲ್ಲ, ಅದು ವರ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ಫಾ. ಡೆನಿಸ್ ಡೆಸಾ ಅಭಿಮತ ವ್ಯಕ್ತಪಡಿಸಿದರು.
ತೊಟ್ಟಂ ಚರ್ಚ್ನ ಸ್ತ್ರೀ ಸಂಘಟನೆ ಭಾನುವಾರ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಹಲವಾರು ಉದಾಹರಣೆ ನಮ್ಮ ಮುಂದಿವೆ. ಸುನೀತಾ ವಿಲಿಯಮ್ಸ್, ಸೈನಾ ನೆಹ್ವಾಲ್ ಪಿ.ವಿ. ಸಿಂಧು ಹೀಗೆ ಅನೇಕರು ಹಲವಾರು ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಪುರುಷರಷ್ಟೇ ಸಮಾನರಾಗಿ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಶಿಕ್ಷಣ ಕೊಡಿಸಿ, ಸ್ವತಂತ್ರವಾಗಿ ವಿಚಾರಿಸುವ, ನಿರ್ಧಾರ ಕೈಗೊಳ್ಳುವ ಅವಕಾಶ ಕಲ್ಪಿಸಬೇಕು. ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ತಾವೇ ಮುಂದಾಗಬೇಕು ಎಂದರು.
ಸ್ತ್ರೀ ಸಂಘಟನೆಯ ಉಡುಪಿ ಧರ್ಮಪ್ರಾಂತ್ಯದ ಅಧ್ಯೆ ಗ್ರೇಸಿ ಕುವೆಲ್ಲೊ, ಕಲ್ಯಾಣಪುರ ವಲಯ ಅಧ್ಯೆ ಮರೀನಾ ಲೂವಿಸ್, ತೊಟ್ಟಂ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ತೊಟ್ಟಂ ಘಟಕದ ಅಧ್ಯಕ್ಷ ಲೂಸಿ ಫೆರ್ನಾಂಡಿಸ್ ಸ್ವಾಗತಿಸಿದರು. ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಜೆನವಿವ್ ಕವಿತಾ ಕುಟಿನ್ಹೊ 'ಹೆಣ್ಣು ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ' ಕುರಿತು ಉಪನ್ಯಾಸ ನೀಡಿದರು. ಚರ್ಚ್ನ ಮಹಿಳಾ ಸದಸ್ಯರಿಂದ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಮಾಜದಲ್ಲಿ ಹೆಣ್ಣು ಯಾವ ರೀತಿಯಲ್ಲಿ ಸೇವೆ ನೀಡುತ್ತಾಳೆ ಎನ್ನುವುದನ್ನು ಗೀತ ರೂಪಕದ ಮೂಲಕ ಪ್ರಸ್ತುತ ಪಡಿಸಿ, ಮಹಿಳೆಯ ಮಹತ್ವ ತಿಳಿಸಿದ ರೀತಿ ಗಮನ ಸೆಳೆಯಿತು.