

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ರಚಿಸಿದ ‘ತುಘಲಕ್’ ನಾಟಕದ ಪ್ರದರ್ಶನಕ್ಕೆ ಈಗ ನೂರರ ಸಂಭ್ರಮ. ಈ ಹಿನ್ನೆಲೆಯಲ್ಲಿ ‘ಸಮುದಾಯ ಬೆಂಗಳೂರು’ ತಂಡ ಶನುವಾರ ಮತ್ತು ಭಾನುವಾರ (ಅ. 28, 29) ‘ಕಾರ್ನಾಡರ ರಂಗೋತ್ಸವ’ ಆಯೋಜಿಸಿದೆ.
ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಂಗೋತ್ಸವದಲ್ಲಿ ‘ಕಾರ್ನಾಡರ ನೆನಪು’ ವಿಚಾರ ಸಂಕಿರಣ, ಸ್ಮರಣ ಸಂಚಿಕೆ ಬಿಡುಗಡೆ, ಕೆ.ಎಂ. ಚೈತನ್ಯ ನಿರ್ದೇಶನದ ಕಾರ್ನಾಡ್ ಸಾಕ್ಷ್ಯಚಿತ್ರ ಪ್ರದರ್ಶನ, ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ, ‘ಕಾರ್ನಾಡರ ಕೃತಿಗಳು- ಒಳನೋಟ’ ವಿಚಾರ ಸಂಕಿರಣ, ‘ರಂಗ ಚಿಂತನ’ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ.
‘ತುಘಲಕ್’ ನಾಟಕದ 100ನೇ ಪ್ರದರ್ಶನ ಡಾ. ಸ್ಯಾಮ್‌ಕುಟ್ಟಿ ಪಟ್ಟಂಕರಿ ನಿರ್ದೇಶನದದಲ್ಲಿ ಮೂಡಿಬರಲಿದೆ. ರಂಗೋತ್ಸವದಲ್ಲಿ ಕಲಾವಿದರು, ಕವಿ ಸಾಹಿತಿಗಳು, ರಂಗಕರ್ಮಿಗಳು, ಕಲಾಸಕ್ತರು ಭಾಗವಹಿಸಲಿದ್ದಾರೆ.
ಅಪ್ಪಟ ರಾಜಕೀಯ ನಾಟಕ: ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ಕೃತಿ, ಒಂದು ಅಪ್ಪಟ ರಾಜಕೀಯ ನಾಟಕವಾಗಿ ಎನಿಸಿದೆ. ಐತಿಹಾಸಿಕ ವ್ಯಕ್ತಿಯ ಕಥೆಯಾಗಿರದೆ, ಸಮಕಾಲೀನ ರಾಜಕೀಯದ ಹಲವು ಅರ್ಥ ಪರಂಪರೆಯನ್ನೂ ಧ್ವನಿಸುತ್ತದೆೆ. ಧರ್ಮ ಮತ್ತು ರಾಜಕೀಯದ, ಅರಮನೆ ಮತ್ತು ಗುರುಮನೆಯ ನಡುವಿನ ಅನೈತಿಕ ಸಂಬಂಧಗಳು, ಧರ್ಮದ ದಾಳವನ್ನು ಉಪಯೋಗಿಸಿ ಪ್ರಭುತ್ವ ನಡೆಸುತ್ತಿರುವಂಥ ಮಾರುಕಟ್ಟೆಯ ಹುನ್ನಾರಗಳು, ರಾಜನ ರೋಗ ಪ್ರಜೆಗಳ ಗಾಯವಾಗಿ ಮಾರ್ಪಾಡುವಂತಹ ವ್ಯಂಗ್ಯ, ಹಿಂಸಾರತಿಯನ್ನು ಅನುಭವಿಸುವಂಥ ಬಹುದೊಡ್ಡ ಆಟ ಈ ನಾಟಕದಲ್ಲಿದೆ.
ಟಿಕೆಟ್‌ಗಾಗಿ ಇಲ್ಲಿ ಸಂಪರ್ಕಿಸಿ: ರವೀಂದ್ರ ಕಲಾಕ್ಷೇತ್ರದ ಪದ್ದಣ್ಣ ತಾಲೀಮು ಕೊಠಡಿಯಲ್ಲಿ ಅ. 27ರವರೆಗೆ ನಿತ್ಯ ಸಂಜೆ 6 ರಿಂದ 9ರವರೆಗೆ ಉತ್ಸವದ ಪಾಸ್ ಹಾಗೂ ಟಿಕೆಟ್‌ಗಳು ಲಭ್ಯವಿದೆ.