

ಬೀರೂರು: ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಬಹಿರಂಗ ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಕೊಲ್ಲಾಪುರದ ಗಿರೀಶ ಗೌಡ ಪಂಜಾಬ್‌ನ ಅಮಿತ್‌ರನ್ನು ಸೋಲಿಸಿ ಬೆಳ್ಳಿಗದೆಯನ್ನು ತಮ್ಮದಾಗಿಸಿಕೊಂಡರು.
ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರ ರಥೋತ್ಸವದ ಅಂಗವಾಗಿ ಗಣಪತಿ ಪೆಂಡಾಲ್ ಆವರಣದಲ್ಲಿ ಶ್ರೀಶಿವಾಜಿ ವ್ಯಾಯಾಮ ಶಾಲೆ ಸೇವಾಸಂಘ,ಪುರಸಭೆ ಮತ್ತು ಸಾರ್ವಜನಿಕರ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ,ರಾಷ್ಟ್ರ ಮಟ್ಟದ ಹೊನಲು ಬೆಳಿಕಿನ ಬಹಿರಂಗ ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಭಾನುವಾರ ಬೆಳ್ಳಿಗದೆಗಾಗಿ ನಡೆದ ಕುಸ್ತಿಯಲ್ಲಿ ಗಿರೀಶ್ ಗೌಡ ಹಾಗೂ ಅಮಿತ್ ಜೋಡಿ ಕಂಡು ಪ್ರೇಕ್ಷಕರು ಬೆರಗಾದರು. ಸತತ 32 ನಿಮಿಷ ಕುಸ್ತಿಪಟುಗಳು ಸೆಣಸಾಟ ನಡೆಸಿದರು. ಕಡೆಗೆ ಅಮಿತ್‌ರವರ ಹೆಗಲನ್ನು ಭೂಮಿಗೆ ಮುಟ್ಟಿಸುವ ಮೂಲಕ ಗಿರೀಶ್ ಗೌಡ ವಿಜೇತರಾದರು. ಪಾರಂಪರಿಕ ಕುಸ್ತಿ ಸ್ಪರ್ಧೆಗಳ ಪ್ರೋತ್ಸಾಹಕ್ಕಾಗಿ ಮಂಜೋಜಿರಾವ್ ಸೂರ್ಯವಂಶಿ ಸ್ಮಾರಕ ಬೆಳ್ಳಿಗದೆ ಪ್ರಾಯೋಜಿಸಿದ್ದ ಸತ್ಯನಾರಾಯಣ ಸೂರ್ಯವಂಶಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಬೆಳಗಾವಿ, ಧಾರವಾಡ, ಮೈಸೂರು, ಶಿಕಾರಿಪುರ, ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಲವಾರು ಕುಸ್ತಿಪಟುಗಳು ಆಗಮಿಸಿದ್ದರು. ಪ್ರಮುಖವಾಗಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಂತರಘಟ್ಟಮ್ಮ ಪ್ರಶಸ್ತಿ, ಶ್ರೀವೀರಭದ್ರಸ್ವಾಮಿ ಪ್ರಶಸ್ತಿ, ಅಂಬಿಗರ ಚೌಡಯ್ಯ ಪ್ರಶಸ್ತಿ, ಸವಿತಾ ಸಮಾಜ ಪ್ರಶಸ್ತಿ, ಬಿ.ಸಿ.ಬಸವರಾಜಪ್ಪ ಪ್ರಶಸ್ತಿ, ಮಡಿವಾಳ ಮಾಚಿದೇವ ಪ್ರಶಸ್ತಿ, ಮದೀನ ಮಸೀದಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಆಯೋಜಿಸಲಾಗಿತ್ತು.