

ಹಾಸನ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 8ನೇ ವಾರ್ಡಿನ ಸದಸ್ಯ ಗಿರೀಶ್ ಚನ್ನವೀರಪ್ಪ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಸನ ಮಹಾನಗರ ಪಾಲಿಕೆಯ ಕುವೆಂಪು ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರಾದ ಪ್ರಭಾರಿ ವೆಂಕಟರಾಜು ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಗಿರೀಶ್ ಚನ್ನವೀರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಎಂದು ಘೋಷಣೆ ಮಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ಜೆಡಿಎಸ್‌ನ ಎಲ್ಲ ಸದಸ್ಯರು ಮತ್ತು ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಭಾಗವಹಿಸಿದ್ದರು.
ಇದಕ್ಕೂ ಮೊದಲು ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಗಿರೀಶ್ ಚನ್ನವೀರಪ್ಪ, ಅಶ್ವಿನಿ ಮಹೇಶ್, ರಫೀಕ್ ಮತ್ತು ಅಮೀರ್ ಜಾನ್ ಹೆಸರು ಪ್ರಬಲವಾಗಿ ಕೇಳಿಬಂದಿದ್ದವು. ಈ ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಳೆದ ಎರಡು ದಿನಗಳಿಂದಲೂ ಸದಸ್ಯರ ಜತೆ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದರು. ಬುಧವಾರವೂ ಎಲ್ಲ ಸದಸ್ಯರನ್ನು ಒಮ್ಮತದಿಂದ ಮಾತನಾಡಿಸಿ ಅಂತಿಮವಾಗಿ ಗಿರೀಶ್ ಚನ್ನವೀರಪ್ಪ ಅವರನ್ನು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದರು. ಅದರಂತೆ ಬೆಳಗ್ಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ 2 ಗಂಟೆಗೆ ಚುನಾವಣಾ ಅಧಿಕಾರಿಗಳು ಅವಿರೋಧ ಎಂದು ಘೋಷಣೆ ಮಾಡಿದರು. ಜೆಡಿಎಸ್ ಎಲ್ಲ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನೂತನವಾಗಿ ಆಯ್ಕೆಯಾದ ಗಿರೀಶ್ ಚನ್ನವೀರಪ್ಪ ಅವರನ್ನು ಅಭಿನಂದಿಸಿದರು. ಮೇಯರ್ ಘೋಷಣೆಯಾಗುತ್ತಿದ್ದಂತೆ ಹೊರಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಗಿರೀಶ್ ಚನ್ನವೀರಪ್ಪ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅ.16ಕ್ಕೆ ಅವಧಿ ಮುಕ್ತಾಯ: ಹಾಸನ ಮಹಾನಗರ ಪಾಲಿಕೆಯ ಆಡಳಿತದ ಅವಧಿ ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಅ.16ಕ್ಕೆ ಅವಧಿ ಮುಕ್ತಾಯವಾಗಲಿದ್ದು, ಅ.17ರಿಂದ ಮೈಸೂರಿನ ಪ್ರಾದೇಶಿಕ ಆಯುಕ್ತರು ಆಡಳಿತ ಅಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ನಗರಸಭೆ ಆಗಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಮಹಾನಗರ ಪಾಲಿಕೆಯಾಗಿರುವುದರಿಂದ ಮೈಸೂರಿನ ಪ್ರಾದೇಶಿಕ ಆಯುಕ್ತರು ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಂದು ವೇಳೆ ಚುನಾವಣಾ ಆಯೋಗ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಮಾಡಿದರೆ ಈ ಅವಧಿ ಅಲ್ಲಿಗೆ ಮುಕ್ತಾಯವಾಗಲಿದೆ. ಒಂದು ವೇಳೆ ಚುನಾವಣೆ ಘೋಷಣೆ ಆಗದಿದ್ದರೆ ಮುಂದಿನ ವರ್ಷ ಏಪ್ರಿಲ್‌ವರೆಗೂ ಅವಧಿ ವಿಸ್ತರಣೆ ಆಗಲಿದ್ದು, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ಎಲ್ಲ ಸದಸ್ಯರು ಕೂಡ ಬಹುಮತದಿಂದ ತೀರ್ಮಾನ ತೆಗೆದುಕೊಂಡಿದ್ದಾರೆ.
5 ತಿಂಗಳಲ್ಲಿ 3 ಮೇಯರ್!
ಹಾಸನ ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ 5 ತಿಂಗಳಲ್ಲಿ ಮೂರು ಜನ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪಾಲಿಕೆಯಾಗಿ ಏ.28ರಂದು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಘೋಷಣೆ ಮಾಡಿತ್ತು. ನಗರಸಭೆ ಅಧ್ಯಕ್ಷರಾಗಿದ್ದ ಚಂದ್ರೇಗೌಡ ಮೊದಲ ಮೇಯರ್ ಆದರು. ಆದರೆ ಅವರ ಸದಸ್ಯತ್ವ ಅನರ್ಹವಾದ ಹಿನ್ನೆಲೆಯಲ್ಲಿ ಉಪಮೇಯರ್ ಆಗಿದ್ದ ಹೇಮಲತಾ ಕಮಲ್‌ಕುಮಾರ್ ಪ್ರಭಾರಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಗಿರೀಶ್ ಚನ್ನವೀರಪ್ಪ ಅವರು 3ನೇ ಮೇಯರ್ ಆಗಿದ್ದಾರೆ.
ನಗರದ ಅಭಿವೃದ್ಧಿಗೆ ಶ್ರಮಿಸುವೆ: 8ನೇ ವಾರ್ಡಿನ ಮತದಾರರು ಹಾಗೂ ನಮ್ಮ ಪಕ್ಷದ ವರಿಷ್ಠರು ಸಹಕಾರದಿಂದ ನಾನು ಈಗ ಮೇಯರ್ ಆಗಿದ್ದೇನೆ. ನಗರದ ಅಭಿವೃದ್ಧಿಗೆ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತೇನೆ ಎಂದು ನೂತನ ಮೇಯರ್ ಗಿರೀಶ್ ಚನ್ನವೀರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಳ್ಮೆಯಿಂದ ಕಾದಿದ್ದಕ್ಕೆ ನನಗೆ ಈಗ ಮೇಯರ್ ಸ್ಥಾನ ಸಿಕ್ಕಿದೆ. ಈ ಹಿಂದೆ ನನಗೆ ಅಧಿಕಾರ ಸಿಗಬೇಕಾಗಿತ್ತು. ಆದರೆ ಚಂದ್ರೇಗೌಡರು ರಾಜೀನಾಮೆ ನೀಡಲಿಲ್ಲ. ಆದ್ದರಿಂದ ತಡವಾಯಿತು. ನನಗೆ ಸಿಕ್ಕಿರುವ ಅಲ್ಪ ಅವಧಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಒತ್ತುವರಿ ಸೇರಿದಂತೆ ನಗರದ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತೇನೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಪಕ್ಷಕ್ಕೆ ಗೆಲುವು: ಕಳೆದ ಬಾರಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಕೆಲ ಗೊಂದಲಗಳಿಂದ ಹಿನ್ನಡೆಯಾಗಿತ್ತು. ಆದರೆ ಈಗ ಕಾನೂನು ಹೋರಾಟದಲ್ಲಿ ಗೆದ್ದು ಈಗ ನಮ್ಮ ಪಕ್ಷಕ್ಕೆ ಗೆಲುವಾಗುವ ಮೂಲಕ ಗಿರೀಶ್ ಚನ್ನವೀರಪ್ಪ ಮೇಯರ್ ಆಗಿದ್ದಾರೆ ಎಂದು ಶಾಸಕ ಎಚ್.ಪಿ.ಸ್ವರೂಪ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರೇಗೌಡರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಹಿಂದುಳಿದ ಸಮುದಾಯಕ್ಕೆ ಅಧಿಕಾರ ಹಂಚಿಕೆ ಮಾಡುವ ಉದ್ದೇಶದಿಂದ ಚಿಂತನೆ ನಡೆಸಿದ್ದವು. ಆದರೆ ಅವರು ಪಕ್ಷದ ವಿರುದ್ಧವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಸೇರಿ ಅವಿಶ್ವಾಸದಲ್ಲಿ ಗೆದ್ದಿದ್ದರು. ಕಾನೂನು ಹೋರಾಟದಲ್ಲಿ ನಮಗೆ ಗೆಲುವಾಗಿದೆ ಎಂದು ಹೇಳಿದರು.
ಪಕ್ಷ ವಿರೋಧಿಗಳಿಗೆ ತಕ್ಕ ಉತ್ತರ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಕಾನೂನಿನಲ್ಲಿ ಏನೆಲ್ಲ ಶಿಕ್ಷೆಗಳಾಗುತ್ತವೆ ಎಂಬುದಕ್ಕೆ ಹಿಂದಿನ ಮೇಯರ್ ಅವರೇ ಪ್ರಮುಖ ಉದಾಹರಣೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್‌ನವರು ಬಾರಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿದ್ದರು. ಆದರೆ ಇಂದಿನ ಸಭೆಗೆ ಆ ಎರಡು ಪಕ್ಷದ ಸದಸ್ಯರು ಆಗಮಿಸಿರಲಿಲ್ಲ. ಸಂಸದರು ಮತ್ತು ಮಾಜಿ ಶಾಸಕ ಪ್ರೀತಮ್ ಗೌಡ ಒಟ್ಟಿಗೆ ಇರುತ್ತಾರೆ. ಇದನ್ನು ಯಾವ ರೀತಿ ವಿಶ್ಲೇಷಿಸುವುದು ಎಂಬುದು ನೀವೇ ಹೇಳಬೇಕು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಿಂದ ಒಮ್ಮತದಿಂದ ಗಿರೀಶ್ ಚನ್ನವೀರಪ್ಪ ಮೇಯರ್ ಆಗಿದ್ದಾರೆ. ನಗರದ ಸಮಗ್ರ ಅಭಿವೃದ್ಧಿಗೆ ಅವರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಲಿ. ಜಿಲ್ಲಾ ಮಟ್ಟದಲ್ಲಿ ಆಗುತ್ತಿರುವಂತಹ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ ಎಂದು ಹೇಳಿದರು.
ಒಂದೇ ಕುಟುಂಬದ ಮೂವರಿಗೆ ಅಧಿಕಾರ: ಹಾಸನ ಮಹಾನಗರ ಪಾಲಿಕೆ ಮೇಯರ್ ಆಗಿ ಗಿರೀಶ್ ಚನ್ನವೀರಪ್ಪ ಆಯ್ಕೆಯಾಗುವ ಮೂಲಕ ಒಂದೇ ಕುಟುಂಬದ ಮೂವರು ಅಧ್ಯಕ್ಷ ಸ್ಥಾನವನ್ನು ಪಡೆದು ಹಾಸನದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ ಚನ್ನವೀರಪ್ಪ ಅವರು ಕಾಂಗ್ರೆಸ್‌ನಿಂದ 2001ರಿಂದ 2003ರವರೆಗೆ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಅವರ ಸೊಸೆ ನೇತ್ರಾವತಿ ಗಿರೀಶ್ ಕೂಡ ಅಧ್ಯಕ್ಷರಾಗಿದ್ದರು. ಇದೀಗ ಅವರ ಪುತ್ರ ಗಿರೀಶ್ ಚನ್ನವೀರಪ್ಪ ಪಾಲಿಕೆಯ ಮೇಯರ್ ಆಗುವ ಮೂಲಕ ಒಂದೇ ಕುಟುಂಬದಲ್ಲಿ ಮೂವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಮೊದಲ ಮಹಿಳಾ ಮೇಯರ್ ಹೇಮಲತಾ: ಹೇಮಲತಾ ಕಮಲ್‌ಕುಮಾರ್ ಅವರು ಕೇವಲ ಒಂದು ತಿಂಗಳು ಪ್ರಭಾರಿ ಮೇಯರ್ ಆಗಿ ಕಾರ್ಯನಿರ್ವಹಿಸಿದರು. ಈ ಮೂಲಕ ಮೊದಲ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚಂದ್ರೇಗೌಡ ಅವರ ಸದಸ್ಯತ್ವ ಅನರ್ಹಗೊಂಡ ನಂತರ ಉಪಮೇಯರ್‌ರಾಗಿದ್ದ ಹೇಮಲತಾ ಪ್ರಭಾರಿ ಮೇಯರ್ ಆಗಿ ಆ.16ರಂದು ಅಧಿಕಾರ ಸ್ವೀಕರಿಸಿದರು. ಅವರ ಅವಧಿಯಲ್ಲಿ ಸ್ವಚ್ಛತೆ, ಇನ್ನಿತರ ಕಾರ್ಯಗಳಿಗೆ ಬಗ್ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.