

ಗೋಣಿಕೊಪ್ಪ: ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿದ್ದ ಗಿರಿಜನರ ಹಾಡಿಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕ್ಷೇತ್ರದ ಶಾಸಕರ ಕಾಳಜಿಗೆ ಹಾಡಿಯ ಗಿರಿಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲದಾಳ ಗಿರಿಜನ ಹಾಡಿಯಲ್ಲಿ 18ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಹಲವು ದಶಕಗಳ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳಲ್ಲಿ ಗಿರಿಜನರು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ವತಿಯಿಂದ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿತ್ತು.
ಆದರೆ ಗಿರಿಜನರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣ ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಹೀಗಾಗಿ ಗಿರಿಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿತ್ತು. ಒಂದೊಂದು ಮನೆಗೂ 10 ಸಾವಿರ ರೂ.ಗಳಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಕಡಿತ ಮಾಡಲಾಗಿತ್ತು. ದೊಡ್ಡ ಮೊತ್ತದ ಹಣವನ್ನು ಇಲಾಖೆಗೆ ಕಟ್ಟಲಾಗದ ಗಿರಿಜನರು ತಮ್ಮ ನೋವನ್ನು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು.
ಗಿರಿಜನರ ಹಾಡಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೆಸ್ಕ್‌ನ ಹಿರಿಯ ಅಧಿಕಾರಿ ಇಇ ರಮಾಬಾಯಿ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದರು. ಸಮಾಜದ ಕಟ್ಟಕಡೆಯ ಗಿರಿಜನರ ಮನೆಗಳಿಗೆ ವಿದ್ಯುತ್ ನಿಲುಗಡೆ ಮಾಡಿರುವುದು ಸರಿಯಲ್ಲ. ತಕ್ಷಣವೇ ವಿದ್ಯುತ್ ಸಂಪರ್ಕ ನೀಡುವಂತೆ ನಿರ್ದೇಶನ ನೀಡಿದ್ದರು.
ಶಾಸಕರ ಸೂಚನೆ ಮೇರೆಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಅವರು ನಿಟ್ಟೂರಿನ ಪಾಲದಾಳ ಗಿರಿಜನರ ಹಾಡಿಗೆ ತೆರಳಿ ಸೆಸ್ಕ್ ಸಿಬ್ಬಂದಿಯಿಂದ 18 ಮನೆಗಳಿಗೂ ವಿದ್ಯುತ್‌ಸಂಪರ್ಕ ಕೊಡಿಸಿದರು.
ನಿಟ್ಟೂರು ಗ್ರಾಪಂ ಸದಸ್ಯರಾದ ಜೆ.ಎಸ್.ಅಪ್ಪಣ್ಣ, ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪೊರಂಗಡ ಪವನ್ ಚಿಟ್ಟಿಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಾದಲಿ, ಹಾಡಿಯ ಪ್ರಮುಖರಾದ ರಾಜು, ಮುತ್ತ, ಚಿಪ್ಪ, ಬೋಜ ಮತ್ತಿತರರು ಇದ್ದರು.