ಸರ್ವಜನಾಂಗದ ಧಾರ್ಮಿಕ ಕ್ಷೇತ್ರ

giri
ಸೋಂಪುರ ಹೋಬಳಿಯ ಶಿವನ ಕಲ್ಲು ಮಲ್ಲೇಶ್ವರದಲ್ಲಿ ಅಮಾವಾಸ್ಯೆಯ ಗಿರಿ ಪ್ರದಕ್ಷಣೆ ಕಾರ್ಯಕ್ರಮದಲ್ಲಿ ನೆಲಮಂಗಲ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ, ವನಕಲ್ಲು ಮಠದ ಪೀಠಾಧ್ಯಕ್ಷ ಡಾ.ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಇದ್ದರ
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರ ಬಹಳ ಪುರಾತನವಾದದ್ದು ಪ್ರೌಢದೇವರಾಯನ ಕಾಲದಿಂದ ಈ ಮಠದ ಪರಂಪರೆ ಪ್ರಾರಂಭಗೊಳ್ಳುತ್ತದೆ, ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸರ್ವ ಸಮುದಾಯದ ಸರ್ವ ಜನಾಂಗದವರು ಈ ಕ್ಷೇತ್ರದ ಭಕ್ತರಾಗಿದ್ದಾರೆ ಎಂದು ನೆಲಮಂಗಲ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಹೇಳಿದರು.
ಸೋಂಪುರ ಹೋಬಳಿಯ ಶಿವನ ಕಲ್ಲು ಮಲ್ಲೇಶ್ವರದಲ್ಲಿ ಅಮಾವಾಸ್ಯೆಯ ಗಿರಿ ಪ್ರದಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಂಗರು ಮಣ್ಣೆಯನ್ನು ರಾಜ್ಯಧಾನಿಯಾಗಿ ಮಾಡಿಕೊಂಡಾಗ ಪುರುಷ ರಾಜ ವನಕಲ್ಲು ಮಲ್ಲೇಶ್ವರ ಕ್ಷೇತ್ರದಲ್ಲಿ ಈಶ್ವರ ಮತ್ತು ಗಂಗೆ ಗೌರಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಶ್ರೀ ಕ್ಷೇತ್ರದ ದೈವದ ಸ್ಪರ್ಶ ನೀಡಿದರು. ಕಾಯಕಯೋಗಿ ಸಿದ್ದಯೋಗಾನಂದ ಮಹಾಸ್ವಾಮೀಜಿ ಮಠದಲ್ಲಿದ್ದು ಆಯುರ್ವೇದ ವಿದ್ಯೆಯನ್ನು ಆರಂಭಿಸಿದರು. ಕಾಯಿಲೆಗಳಿಗೆ ದಿವ್ಯ ಔಷಧ ನೀಡುವುದರ ಮೂಲಕ ಈ ಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿದರು ಎಂದು ಹೇಳಿದರು.
ತದನಂತರ ಈ ಪೀಠದ ನೂತನ ಪೀಠಾಧ್ಯಕ್ಷ ಡಾ.ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ, ಪೂಜ್ಯರು ಪಾದರಸದಂತೆ ಎಲ್ಲ ಕಡೆ ಬಸವ ತತ್ವವನ್ನು ಸಾರುತ್ತಿದ್ದಾರೆ, ಧರ್ಮ ಮತ್ತು ನ್ಯಾಯವನ್ನು ಬೋಧಿಸುತ್ತಾ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ, ಪ್ರಪ್ರಥಮವಾಗಿ ಈ ಗಿರಿ ಪ್ರದಕ್ಷಿಣೆ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.
ವನಕಲ್ಲು ವಿಶೇಷ: ಈ ಕ್ಷೇತ್ರ ಪುಣ್ಯಕ್ಷೇತ್ರವಾಗಿದ್ದು, ಈಶ್ವರ ಗಂಗೆ, ಗೌರಿ, ಷಣ್ಮುಖ, ಗಣಪತಿ, ಬಯಲು ವೀರಭದ್ರ ಈಶ್ವರನ ಪರಿವಾರವೂ ಇಲ್ಲಿ ನೆಲೆಸಿರುವುದು ವಿಶೇಷ ಎಂದು ವನಕಲ್ಲು ಮಠದ ಪೀಠಾಧ್ಯಕ್ಷ ಡಾ.ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಹೇಳಿದರು. ಹಲವು ಭಕ್ತರು ಮಲ್ಲೇಶ್ವರನಿಗೆ ಅರಿಕೆ ಮಾಡಿಕೊಳ್ಳುವುದರ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ, ಈ ಕ್ಷೇತ್ರದ ಅಧಿದೇವತೆಯಾದ ವನಕಲ್ಲು ಮಲ್ಲೇಶ್ವರರು 15ನೇ ಶತಮಾನದ ಸಾಂಸ್ಕೃತಿಕ ನಾಯಕರಾಗಿದ್ದವರು, ವನಕಲ್ಲು ಮಲ್ಲೇಶ್ವರರು, ಗುರು ಮಲ್ಲೇಶ್ವರರು, ಮಲೆ ಮಾದೇಶ್ವರರು, ಮಂಟೇಸ್ವಾಮಿ, ಜುಂಜಪ್ಪ ಸ್ವಾಮಿ ಜಾನಪದ ಸಾಂಸ್ಕೃತಿಕ ವೀರರಾಗಿ ಈ ನಾಡನ್ನು ಬೆಳಗಿದ ಮಹಾ ತಪಸ್ವಿಗಳು ಎಂದು ಬಣ್ಣಿಸಿದರು. ಇವರ ತತ್ವ ಸಿದ್ಧಾಂತಗಳು ಈ ಸಮಾಜಕ್ಕೆ ಆದರ್ಶವಾಗಿದೆ, ಪ್ರತಿ ತಿಂಗಳು ಅಮಾವಾಸ್ಯೆಯ ಒಂದು ದಿನ ಮುಂಚಿತವಾಗಿ ಅಖಂಡ ಭಜನೆ ಪ್ರವಚನ ಮತ್ತು ಅಮಾವಾಸ್ಯೆಯ ಬೆಳಗಿನ ಜಾವ ಗಿರಿ ಪ್ರದಕ್ಷಿಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net