

ನಾಗಮಂಗಲ : ತಾಲೂಕಿನ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್ ಅಧ್ಯಕ್ಷರಾಗಿ ಬಿಂಡಿಗನವಿಲೆ ಹೋಬಳಿ ಶಿಖರನಹಳ್ಳಿಯ ಗಿರಿಗೌಡ ಅವಿರೋಧವಾಗಿ ಆಯ್ಕೆಯಾದರು.
ತಟ್ಟಹಳ್ಳಿ ನರಸಿಂಹಮೂರ್ತಿ ರಾಜೀನಾಮೆ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಗಿರಿಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನವಣಾಧಿಕಾರಿ ಶೋಭಾ ಅವರು ಗಿರಿಗೌಡ ಅವರ ಆಯ್ಕೆಯನ್ನು ಸಿಂಧುಗೊಳಿಸಿದರು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಒಂದೂವರೆ ತಿಂಗಳಿಗೆ ಅಧ್ಯಕ್ಷ:
ಬುಧವಾರ ಆಯ್ಕೆಯಾದ ಗಿರಿಗೌಡ ಅವರ ಅಧಿಕಾರದ ಅವಧಿ ಒಂದು ತಿಂಗಳು ಮಾತ್ರ. ಫೆ.2ರಂದು ಪಿಎಲ್‌ಡಿ ಬ್ಯಾಂಕ್‌ನ ನಿರ್ದೆಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು ಈಗಾಗಲೇ ಸರ್ಕಾರ ದಿನಾಂಕವನ್ನು ಘೋಷಣೆ ಮಾಡಿದೆ. ಆದರೂ ಅಂದು ಮನ್‌ಮುಲ್ ನಿರ್ದೆಶಕರ ಚುನಾವಣೆಯೂ ಇದ್ದು ಅಂದು ನಡೆಯುವುದು ಅನುಮಾನವಾಗಿದೆ. ಇದರಿಂದಾಗಿ ಫೆ. 9ರೊಳಗೆ ಚುನಾವಣೆ ನಡೆಯದಿದ್ದಲ್ಲಿ ಬ್ಯಾಂಕ್ ಸೂಪರ್ ಸೀಡ್ ಆಗಿ ಆಡಳಿತಾಧಿಕಾರಿ ನೇಮಕ ಆಗಲಿದ್ದಾರೆ ಎಂಬುದಾಗಿ ಕೇಳಿಬರುತ್ತಿದ್ದು, ಕೇವಲ ಒಂದು ತಿಂಗಳ ಅವಧಿಗಾಗಿ ಗಿರಿಗೌಡ ಅವರನ್ನು ಅಧ್ಯಕ್ಷಗಾದಿ ಮೇಲೆ ಕೂರಿಸುವ ಪ್ರಮೇಯವೇನಿತ್ತು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚಾ ವಿಷಯವಾಗಿದೆ.
ಮುಖಂಡ ತಿಮ್ಮರಾಯಿಗೌಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕ ಲಕ್ಷ್ಮೀನಾರಾಯಣಗೌಡ, ತಮ್ಮಣ್ಣಗೌಡ, ನಾಗತಿಹಳ್ಳಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್, ನಾಗರಾಜು, ಹಡೇನಹಳ್ಳಿ ರಮೇಶ್ ಮತ್ತಿತರಿದ್ದರು.