ಕರೊನಾ ಆತಂಕದ ಮಧ್ಯೆ ವರುಣಾರ್ಭಟ

yadgir
Published on

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಒಂದೆಡೆ ಕರೊನಾ ವೈರಸ್ ಅಟ್ಟಹಾಸದಿಂದ ನಲುಗಿದ ಗಿರಿ ಜಿಲ್ಲೆ ಜನತೆ ಇದೀಗ ಪ್ರವಾಹದ ಆತಂಕದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಅಪಾರ ಪ್ರಮಾಣದ ನೀರನ್ನು ಕೃಷ್ಣೆ ಒಡಲಿಗೆ ಹರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಪಾತ್ರಕ್ಕೆ ಪ್ರತಿನಿತ್ಯ 2.36 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡುತ್ತಿರುವುದು ಪಾತ್ರದ ಹಳ್ಳಿ ಜನರಲ್ಲಿ ದುಗುಡ ಹೆಚ್ಚಿದೆ.
ಭಾನುವಾರ ಶಹಾಪುರದಲ್ಲಿ 27 ಮಿ.ಮೀ, ಸುರಪುರ 30, ಯಾದಗಿರಿ 32 ಗುರುಮಠಕಲ್ 33, ವಡಗೇರಾ 27 ಹಾಗೂ ಹುಣಸಗಿಯಲ್ಲಿ 32 ಮಿಮೀ ಮಳೆ ಸುರಿದಿದೆ. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನಜೀವನ ಸಂಪೂಣ ಅಸ್ತವ್ಯಸ್ತಗೊಂಡಿದೆ. ಜಿಟಿಜಿಟಿ ಮಳೆಗೆ ಹಳ್ಳಿಗಾಡಿನಲ್ಲಿನ ಪುರಾತನ ಮನೆಗಳು ಬಿರುಕು ಬಿಟ್ಟು ಛಾವಣಿಯಲ್ಲಿ ನೀರು ಬಸಿಯುತ್ತಿದ್ದು, ಆಹಾರ ಪದಾರ್ಥ ಹಾಳಾಗಿವೆ.

ಕರೊನಾ ಹರಡುವಿಕೆ ನಿಯಂತ್ರಣಕ್ಕೆ ನಾನಾ ಕಸರತ್ತು ನಡೆಸುತ್ತಿರುವ ಜಿಲ್ಲಾಡಳಿತಕ್ಕೆ ಇದೀಗ ಪ್ರವಾಹ ಪರಿಸ್ಥಿತಿ ನಿರ್ವಹಣೆ ಬಿಗ್ ಚಾಲೆಂಜ್ ಎನಿಸಿದೆ. ಕೃಷ್ಣಾ ಮತ್ತು ಭೀಮಾ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದು, ನದಿ ಪಾತ್ರದ ಜನರ ಸುರಕ್ಷತೆ ದೃಷ್ಟಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಯಾವುದೇ ಕಾರಣಕ್ಕೂ ಜನ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಲಾಗುತ್ತಿದೆ.

ಕರೊನಾ ಸಂಕಷ್ಟದಿಂದ ಮೊದಲೇ ಸಂದಿಗ್ಧ ಸ್ಥಿತಿಯಲ್ಲಿರುವ ಅಧಿಕಾರಿಗಳು ಏಕಕಾಲಕ್ಕೆ ನೆರೆ ಹಾಗೂ ಕೋವಿಡ್ ಸವಾಲು ನಿರ್ವಹಿಸಲು ಹೆಣಗಾಡುವಂತಾಗಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದರಿಂದ ದವಸ ಧಾನ್ಯಗಳು ಹಾಳಾಗಿದೆ. ಸಮಸ್ಯೆ ಕುರಿತು ಗ್ರಾಮಸ್ಥರು ಕಂದಾಯ ಹಾಗೂ ಪಿಡಿಒ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net