ಕಿರುಗುಂದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯರ ವರ್ಗಾವಣೆ ನಿಶ್ಚಿತ

MDG- teacher
ಕಿರುಗುಂದ ಸರ್ಕಾರಿ ಶಾಲೆಯಲ್ಲಿ ಬಿಇಒ ಹೇಮಂತ್ ಚಂದ್ರ ಸ್ಥಳೀಯರೊಂದಿಗೆ ಸಭೆ ನಡೆಸಿದರು. ಕೆ.ಆರ್.ದಿನೇಶ್, ಎಂ.ಆರ್.ನಜೀರ್, ಯು.ಎಚ್.ರಾಜಶೇಖರ್, ಯು.ಎನ್.ಚಂದ್ರೇಗೌಡ, ಅಬ್ಬಾಸ್, ಕೆ.ಆರ್.ಲೋಕೇಶ್ ಇತರರಿದ್ದರು.
Published on

ಮೂಡಿಗೆರೆ: ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಎದುರೇ ಜಗಳವಾಡುತ್ತಿದ್ದ ಮೂವರು ಶಿಕ್ಷಕಿಯರನ್ನು ವರ್ಗಾವಣೆ ಮಾಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜ್ ಅವರಿಗೆ ಶಿಫಾರಸು ಮಾಡಲು ಬಿಇಒ ಹೇಮಂತ್ ಚಂದ್ರ ನಿರ್ಧರಿಸಿದ್ದಾರೆ.

ಓರ್ವ ಶಿಕ್ಷಕಿ 1994ರಲ್ಲಿ, ಇನ್ನೊಬ್ಬರು ಕಳೆದ ವರ್ಷ, ಮುಖ್ಯಶಿಕ್ಷಕಿ 8 ತಿಂಗಳ ಹಿಂದೆ ವರ್ಗಾವಣೆಗೊಂಡು ಬಂದಿದ್ದಾರೆ. ಈ ಮೂವರೂ ಶಿಕ್ಷಕಿಯರು ಸಣ್ಣಪುಟ್ಟ ವಿಚಾರಕ್ಕೆ ತರಗತಿಯಲ್ಲಿ ವಿದ್ಯಾರ್ಥಿಗಳ ಎದುರು ದಿನನಿತ್ಯ ಜಗಳವಾಡಿಕೊಂಡು ವೈಮನಸ್ಸಿನಿಂದ ಕುಳಿತುಕೊಳ್ಳುತ್ತಾರೆ. ಶಾಲೆಯಲ್ಲಿ ಪಾಠ ನಡೆಯದೆ 3 ತಿಂಗಳಾಗಿದೆ. ಜೂನ್‌ನಲ್ಲಿ ಸೇರ್ಪಡೆಗೆಂದು ಮಕ್ಕಳನ್ನು ಕರೆತಂದ ಪಾಲಕರು, ಶಿಕ್ಷಕಿಯರ ಜಗಳ ನೋಡಿ ಬೇರೆ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ 34ಕ್ಕೆ ಕುಸಿದಿದೆ.
ಅತಿಥಿ ಶಿಕ್ಷಕಿ ಕೂಡ ಶಾಲೆಯಲ್ಲಿದ್ದು ಅವರಿಗೂ ಪಾಠ ಮಾಡಲು ಕಷ್ಟವಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಮುಖ್ಯಶಿಕ್ಷಕಿ ಬಿಸಿಯೂಟದ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಸಾಗಿಸಲು ಬೇರೆ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದರು. ಇದನ್ನು ಮಕ್ಕಳ ಪಾಲಕರು ಪತ್ತೆ ಹಚ್ಚಿ ಅಧಿಕಾರಿಗಳಿಗೆ ದೂರು ನೀಡಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿ ಮುಖ್ಯಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮೇಲೆ ಕಳಿಸಿದ್ದರು. ಜೂನ್ ಆರಂಭದಲ್ಲಿ ನಿಯೋಜನೆ ಅವಧಿ ಕೊನೆಗೊಂಡಿದ್ದು ಮತ್ತೆ ಅವರು ಇದೇ ಶಾಲೆಗೆ ಬಂದಿದ್ದಾರೆ. ಈ ಬಗ್ಗೆ ಸ್ಥಳೀಯರ ದೂರಿನಂತೆ ಮೂವರೂ ಶಿಕ್ಷಕಿಯರನ್ನು ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ನೇಮಿಸುವಂತೆ ಕಿರುಗುಂದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಸ್ಥಳೀಯರು ಸಭೆ ಸೇರಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು.
ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿರುವುದರಿಂದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಬಿಇಒ ಹೇಮಂತ್ ಚಂದ್ರ ಅವರಿಗೆ ಸೂಚಿಸಿದ್ದರು.
ಬುಧವಾರ ಬಿಇಒ ಹೇಮಂತ್ ಚಂದ್ರ ಅವರು ಶಾಲೆಗೆ ಭೇಟಿ ನೀಡಿದಾಗ ಸ್ಥಳೀಯರು ಶಾಲೆ ಆವರಣದಲ್ಲಿ ಜಮಾಯಿಸಿ ಮೂವರೂ ಶಿಕ್ಷಕಿಯರನ್ನು ವರ್ಗಾವಣೆಗೊಳಿಸಬೇಕು. ಬೇರೆ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸಬೇಕೆಂದು ಪಟ್ಟು ಹಿಡಿದರು. ಬಿಇಒ ಮಾತನಾಡಿ, ಮೂವರೂ ಶಿಕ್ಷಕಿಯರ ವಿರುದ್ಧ ಗ್ರಾಪಂನಿಂದ ಎರಡು ದೂರುಗಳು, ಎಸ್‌ಡಿಎಂಸಿ ಹಾಗೂ ಸ್ಥಳೀಯರಿಂದ ಪ್ರತ್ಯೇಕ ದೂರುಗಳು ಬಂದಿದೆ. ಈ ಬಗ್ಗೆ ಪರಿಶೀಲಿಸಿ ಮೂವರನ್ನು ವರ್ಗಾವಣೆಗೊಳಿಸಿ ಬೇರೆ ಶಿಕ್ಷಕರನ್ನು ನೇಮಿಸಲು ಉಪನಿರ್ದೇಶಕರಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ದಿನೇಶ್, ಮಾಜಿ ಅಧ್ಯಕ್ಷರಾದ ಎಂ.ಆರ್.ನಜೀರ್, ಯು.ಎಚ್.ರಾಜಶೇಖರ್, ಹಿರಿಯ ಕೃಷಿಕ ಯು.ಎನ್.ಚಂದ್ರೇಗೌಡ, ಎಸ್‌ಡಿಎಂಸಿ ಸದಸ್ಯ ಮಧು, ಅಬ್ಬಾಸ್, ಕೆ.ಕೆ.ರಾಮಯ್ಯ, ಕೆ.ಆರ್.ಲೋಕೇಶ್, ಕೆ.ಬಿ.ಹರೀಶ್, ಸಿಆರ್‌ಪಿ ಪುರುಷೋತ್ತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net