

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169-ಎಯಲ್ಲಿ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಿಸುವ ಕಾರ್ಯ ಮೇ 13ರಂದು ಸಂಜೆಯೊಳಗೆ ಪೂರ್ಣಗೊಂಡಿದೆ.
ರೈಲ್ವೆ ಇಲಾಖೆಯ ಅನುಮತಿಯ ಮೇರೆಗೆ ಮೇ 12ರಂದು ಬೆಳಗ್ಗೆ 11:30ರಿಂದ ಸ್ಟೀಲ್ ಗರ್ಡರ್ ಬ್ರಿಡ್ಜ್ ಜೋಡಣೆ ಕಾರ್ಯ ನಡೆದಿತ್ತು.
ಸಿದ್ಧಗೊಂಡಿದ್ದ ಸ್ಟೀಲ್ ಸೇತುವೆಯನ್ನು ಇನ್ನೊಂದು ತುದಿಯವರೆಗೆ ತಲುಪಿಸಲು ಗ್ರಿಬ್ಸ್ ತಂತ್ರಜ್ಞಾನದ ಮೂಲಕ ಸಾಗಿಸಲಾಯಿತು. ಸೇತುವೆಯ ಕೆಲಭಾಗದಲ್ಲಿ ಒಂದರ ಮೇಲೊಂದರಂತೆ ಗ್ರಿಬ್ಸ್ ಅಳವಡಿಸಿ, ಅದರ ಮೇಲೆ ರೈಲ್ವೆ ಹಳಿಯ ಮಾದರಿಯಲ್ಲೇ ಎರಡೂ ಕಡೆ ಹಳಿ ನಿರ್ಮಿಸಿ ಯಂತ್ರದ ಮೂಲಕ ಗರ್ಡರ್ ಬ್ರಿಡ್ಜ್ಅನ್ನು ಇನ್ನೊಂದು ತುದಿಗೆ ಎಳೆಯಲಾಯಿತು.
ಅತ್ಯಂತ ಸುರಕ್ಷತಾ ಕ್ರಮಗಳೊಂದಿಗೆ ಎರಡು ದಿನದ ಅವಧಿಯಲ್ಲಿ ಗರ್ಡರ್ ಸೇತುವೆಯನ್ನು ಇನ್ನೊಂದು ತುದಿಗೆ ಸ್ಥಳಾಂತರಿಸಿ ಜೋಡಿಸಲಾಗಿದೆ. ಮೊದಲ ದಿನ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಇನ್ನೂ ಕೆಲವಷ್ಟು ತಾಂತ್ರಿಕ ಕಾರ್ಯಗಳಿದ್ದು, ಸರಿಯಾಗಿ ಸೇತುವೆ ಜೋಡಿಸಿದ ಬಳಿಕ ಅದರ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತದೆ. | ಕೋಟ ಶ್ರೀನಿವಾಸ ಪೂಜಾರಿ. ಸಂಸದ