

ದೇವದುರ್ಗ: ಗ್ರಾಪಂ ವ್ಯಾಪ್ತಿಯಲ್ಲಿ ಕ್ರಿಯಾ ಯೋಜನೆ ಇಲ್ಲದೇ ಕಾಮಗಾರಿ ಮಾಡಬಾರದು. ಪ್ರತಿಯೊಂದು ಕೆಲಸಕ್ಕೂ ಅಗತ್ಯ ದಾಖಲೆ ಇರಬೇಕು ಎಂದು ಪಿಡಿಒಗಳಿಗೆ ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಸೂಚಿಸಿದರು.
ತಾಲೂಕಿನ ರಾಮದುರ್ಗ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ ದೊರೆತ ಪ್ರಯುಕ್ತ ಹಮ್ಮಿಕೊಂಡಿದ್ದ ಸಭೆಯಲ್ಲಿ ಗುರುವಾರ ಮಾತನಾಡಿದರು. ಗ್ರಾಂಧಿ ಗ್ರಾಮ ಪ್ರಶಸ್ತಿಗೆ ರಾಮದುರ್ಗ, ಕೆ.ಇರಬಗೇರಾ, ಗಾಣಧಾಳ, ಪಲಕನಮರಡಿ, ಚಿಂಚೋಡಿ ಗ್ರಾಮಗಳು ಆಯ್ಕೆಯಾಗಿವೆ. ಯೋಜನೆಯಡಿ ಆಯ್ಕೆಯಾದ ಗ್ರಾಪಂಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗುವ ಗ್ರಾಮಗಳು ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿವೆ. ಈ ಕಾರ್ಯ ಮುಂದುವರಿಸಿಕೊಂಡು ಹೋಗಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿವಹಿಸಿ
ನಂತರ ಕೆ.ಇರಬಗೇರಾ ಗ್ರಾಪಂ ವ್ಯಾಪ್ತಿಯ ಶಿಶು ಪಾಲನಾ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾದ ಮಕ್ಕಳ ಸಂಖ್ಯೆ, ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಮಾಹಿತಿ ಪಡೆದರು. ಗಾಣಧಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸ್ವಚ್ಛತೆ, ಕುಡಿವ ನೀರಿನ ವ್ಯವಸ್ಥೆ ಹಾಗೂ ಶೌಚಗೃಹ ನಿರ್ವಹಣೆ ಪರಿಶೀಲಿಸಿದರು. ಮೈದಾನದ ಸಮತಟ್ಟು ಮಾಡುಕೊಂಡುವಂತೆ ಪಿಡಿಒಗೆ ಸೂಚಿಸಿದರು. ಬಾಲ್ಯ ವಿವಾಹ ತಡೆಗಟ್ಟಲು ಶ್ರಮಿಸಿ ಎಂದು ಅಂಗನವಾಡಿ ಕಾರ್ಯಕರ್ತೆರಿಗೆ ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್, ಪಿಡಿಒ ಕಿರಣ್‌ಬಾಬು, ಶಿವಕುಮಾರ ಸಾಹುಕಾರ, ಬಸವರಾಜ ಇತರರಿದ್ದರು.